Friday, November 22, 2024
Homeರಾಜ್ಯಕೋಲಾರದಲ್ಲಿ ಕಾಂಗ್ರೆಸ್ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ : ಕೆ.ಎಚ್.ಮುನಿಯಪ್ಪ

ಕೋಲಾರದಲ್ಲಿ ಕಾಂಗ್ರೆಸ್ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ : ಕೆ.ಎಚ್.ಮುನಿಯಪ್ಪ

ಬೆಂಗಳೂರು,ಮಾ.26– ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕಗ್ಗಂಟು ಇನ್ನೂ ಇತ್ಯರ್ಥಗೊಂಡಿಲ್ಲ. ಈ ನಡುವೆ ಸಚಿವ ಕೆ.ಎಚ್.ಮುನಿಯಪ್ಪ ಯಾರಿಗೇ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ನಾವು ಹೈಕಮಾಂಡ್‍ಗೆ ನೀಡಿದ್ದೇವೆ, ಅದಕ್ಕೆ ಬದ್ದರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಾನು 7 ಬಾರಿ ಗೆಲುವು ಸಾಧಿಸಿದ್ದೆ. ಅಲ್ಲಿ ಈ ಬಾರಿ ಬಿ.ಎಸ್.ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರ ಕೂಡ ಕಾಂಗ್ರೆಸ್‍ನ ಭದ್ರಕೋಟೆ. ಇಲ್ಲಿ ಡಾ.ಎಂ.ಸಿ.ಸುಧಾಕರ್ ಉಸ್ತುವಾರಿ ಸಚಿವರಾಗಿದ್ದಾರೆ. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯಾಗಿದ್ದೇನೆ.

ಸಾಮಾನ್ಯವಾಗಿ ಇದು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಒಳಪಡುತ್ತದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಮೂವರು ಸಚಿವರ ಜವಾಬ್ದಾರಿಯಾಗಿದೆ ಎಂದರು. ಇತ್ತೀಚೆಗೆ ಪಕ್ಷದ ವರಿಷ್ಠ ನಾಯಕರ ಸಭೆಯಲ್ಲಿ ನಾವು ಭಾಗವಹಿಸಿದ್ದು, ಎಲ್ಲರ ಅಭಿಪ್ರಾಯವನ್ನೂ ಹೇಳಿದ್ದೇವೆ. ಯಾರನ್ನೇ ಅಭ್ಯರ್ಥಿ ಮಾಡಿದರೂ ಕಾಂಗ್ರೆಸ್ ಗೆಲ್ಲಿಸುವ ವಾಗ್ದಾನ ಮಾಡಿದ್ದೇವೆ. ಅಭ್ಯರ್ಥಿಯ ಆಯ್ಕೆಯ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೆ ಬಿಡಲಾಗಿದೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆಂದು ತಿಳಿಸಿದರು.

ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತೇವೆ. ಆದ್ಯತೆ ಮೇರೆಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.ರಾಜ್ಯದಲ್ಲಿರುವ 5 ಮೀಸಲು ಲೋಕಸಭಾ ಕ್ಷೇತ್ರಗಳ ಪೈಕಿ ಸಾಮಾನ್ಯವಾಗಿ 2 ಬಲಗೈ ಹಾಗೂ ಇನ್ನೆರೆಡು ಎಡಗೈ ಸಮುದಾಯಕ್ಕೆ ಹಂಚಿಕೆ ಮಾಡಿ, ಒಂದು ಸ್ಥಾನವನ್ನು ಬೋವಿ ಅಥವಾ ಲಂಬಾಣಿಗೆ ನೀಡುವುದು ಸಂಪ್ರದಾಯ.

ಈ ಬಾರಿ ಮೂರೂ ಕ್ಷೇತ್ರಗಳನ್ನು ಬಲಗೈ ಸಮುದಾಯಕ್ಕೆ ನೀಡಲಾಗಿದೆ. ಎರಡು ಕ್ಷೇತ್ರಗಳಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.ಯಾರಿಗೇ ಟಿಕೆಟ್ ಕೊಟ್ಟರೂ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಕಾಂಗ್ರೆಸ್ ಅನ್ನು ಗೆಲ್ಲಿಸುತ್ತೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

RELATED ARTICLES

Latest News