ದುಬೈ/ಟೆಲ್‌ಅವೀವ್,ಅ.3-ದುಬೈನಿಂದ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ ಫ್ಲೈಟ್ 1073 ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಯ ತನಿಖೆ ತೀವ್ರಗೊಂಡಿದ್ದು, ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮೇಲೆ ಭೀಕರ ದಾಳಿ ನಡೆಸಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ ಸಹ-ಪೈಲಟ್‌ನ ಗುರುತು ಪತ್ತೆಯಾಗಿದೆ. ಆರೋಪಿಯನ್ನು ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಮಿ ಎಂದು ಗುರುತಿಸಲಾಗಿದ್ದು, ಈತನ ಮೂಲಭೂತವಾದಿ ಧೋರಣೆ ಮತ್ತು ಸೈದ್ಧಾಂತಿಕ ಹಾದಿಯ ಬಗ್ಗೆ ಹೊಸ ಮಾಹಿತಿಗಳು ಹೊರಬಿದ್ದಿವೆ.
ಮಾಧ್ಯಮ ವರದಿಗಳ ಪ್ರಕಾರ, ಸಹ-ಪೈಲಟ್ ಅಲ್-ಹಮಮಿ ಅವರ ಮೂಲಭೂತವಾದಿ ದೃಷ್ಟಿಕೋನ ಮತ್ತು ಭದ್ರತಾ ಆತಂಕಗಳಿಂದಾಗಿ ಒಮಾನ್ ಏರ್ ಸಂಸ್ಥೆಯು ಈತನನ್ನು ಹಾರಾಟ ನಡೆಸದಂತೆ ಹಿಂದೆ ನಿಷೇಧಿಸಿ, ಕೆಲಸದಿಂದ ಅಮಾನತುಗೊಳಿಸಿತ್ತು. ಆದರೆ, ಒಮಾನಿ ಅಧಿಕಾರಿಗಳು ಈತನ ಮೇಲಿದ್ದ ಭದ್ರತಾ ಆತಂಕದ ಮಾಹಿತಿಯನ್ನು ಇತರ ದೇಶಗಳೊಂದಿಗೆ ಅಥವಾ ಸಂಸ್ಥೆಗಳೊಂದಿಗೆ ಹಂಚಿಕೊಂಡಿರಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಈ ಭದ್ರತಾ ಲೋಪವನ್ನು ಬಳಸಿಕೊಂಡು ಆತ ಫ್ಲೈ ದುಬೈ ಸಂಸ್ಥೆಗೆ ಸೇರಿಕೊಂಡಿದ್ದ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹಾಗೂ ಸೌದಿಯ ಅಲ್ ಅರೇಬಿಯಾ ವರದಿ ಮಾಡಿವೆ. ಸೆಪ್ಟೆಂಬರ್ 30 ರಂದು 170ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನ ಸೌದಿ ಅರೇಬಿಯಾ ವಾಯುಸೀಮೆಯಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ನಾಟಕೀಯ ಘಟನೆ ಸಂಭವಿಸಿದೆ.
ಹಾರಾಟದ ಮಧ್ಯೆ ಸಹ-ಪೈಲಟ್ ಅಲ್-ಹಮಮಿ ಇದ್ದಕ್ಕಿದ್ದಂತೆ ಕ್ಯಾಪ್ಟನ್ ಸಿತ್ ಮಚ್ಚರ್ ಮೇಲೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದೇ ವೇಳೆ ವಿಮಾನದ ನಿಯಂತ್ರಣ ತಪ್ಪಿ, ಕೇವಲ 30 ಸೆಕೆಂಡುಗಳಲ್ಲಿ ಬರೋಬ್ಬರಿ 16,000 ಅಡಿಗಳಷ್ಟು ಕೆಳಗೆ ಬಂದಿತ್ತು. ಗಾಯಗೊಂಡ ಕ್ಯಾಪ್ಟನ್ ಅಪೂರ್ವ ಧೈರ್ಯ ತೋರಿ ತುರ್ತು ಕಾಕ್‌ಪಿಟ್ ಬಾಗಿಲು ತೆರೆದಾಗ, ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಅಸಿಸ್ಟೆಂಟ್ ಸಿಬ್ಬಂದಿ ಒಳನುಗ್ಗಿ ಸಹ-ಪೈಲಟ್‌ನನ್ನು ತಡೆದು ಕೇಬಲ್‌ಗಳಿಂದ ಕಟ್ಟಿಹಾಕಿದ್ದಾರೆ.
ವಿಮಾನದಲ್ಲಿದ್ದ ಆಫ್-ಡ್ಯೂಟಿ ಪೈಲಟ್‌ಗಳು ತಕ್ಷಣ ನಿಯಂತ್ರಣ ತೆಗೆದುಕೊಂಡು, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದರು. ನೆತನ್ಯಾಹು ಹೇಳಿಕೆ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘಟನೆಯನ್ನು ಖಂಡಿಸಿದ್ದು, ಸಹ-ಪೈಲಟ್ ಇಸ್ಲಾಮಿಕ್ ಮೂಲಭೂತವಾದಿ ಬೋಧನೆಗೆ ಒಳಗಾಗಿದ್ದು ಆತಹತ್ಯಾ ದಾಳಿಗೆ ಯತ್ನಿಸಿರಬಹುದು ಎಂದು ಹೇಳಿದ್ದಾರೆ. ಅಲ್ಲದೆ, ಇಸ್ರೇಲ್‌ಗೆ ತೆರಳುವ ವಿಮಾನದಲ್ಲಿ ಈತನಿಗೆ ಅವಕಾಶ ಸಿಕ್ಕ ಲೋಪದೋಷಗಳ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಇಸ್ರೇಲ್‌ನಲ್ಲಿ ವಿಮಾನವನ್ನು ಪತನಗೊಳಿಸುವ ಸ್ಪಷ್ಟ ಉದ್ದೇಶವಿತ್ತು ಎಂಬುದನ್ನು ಆರೋಪಿ ತನಿಖಾಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ. ಯುಎಇ ನೇತೃತ್ವ : ವಿಮಾನ ನೋಂದಣಿಯಾಗಿರುವ ಯುನೈಟೆಡ್ ಅರಬ್ ಎಮಿರೇಟ್‌್ಸ ಪ್ರಸ್ತುತ ಸಂಪೂರ್ಣ ತನಿಖೆಯ ನೇತೃತ್ವ ವಹಿಸಿದ್ದು, ಸೌದಿ ಅರೇಬಿಯಾ ಹಾಗೂ ಇಸ್ರೇಲ್ ತನಿಖಾ ಸಂಸ್ಥೆಗಳು ಸಹಕರಿಸುತ್ತಿವೆ. ಪ್ರಸ್ತುತ ಈ ಘಟನೆಯು ಜಾಗತಿಕ ವಾಯುಯಾನ ರಂಗದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿದ್ದು, ವಿಮಾನ ಸಿಬ್ಬಂದಿಗಳ ಭದ್ರತಾ ತಪಾಸಣೆ ಮತ್ತು ಮೇಲ್ವಿಚಾರಣಾ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯ ಕೇಳಿಬಂದಿದೆ.
