ನಿಶಿನ್ (ಜಪಾನ್),ಅ.3- 2026ರ ಏಷ್ಯನ್ ಕ್ರೀಡಾಕೂಟದ ಪುರುಷರ ಕ್ರಿಕೆಟ್ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 19 ರನ್ಗಳಿಂದ ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿದೆ. ನಿಶಿನ್ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ ಹೈವೋಲ್ಟೇಜ್ ಟಿ20 ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 211 ರನ್ ಗಳಿಸಿತು. 211 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 20 ಓವರ್ಗಳಲ್ಲಿ 192 ರನ್ಗಳಿಗೆ ಸೀಮಿತಗೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಆರಂಭಿಕ ಬ್ಯಾಟ್ಸಮನ್ಗಳಾಗಿ ಕಣಕ್ಕಿಳಿದರು. ಸೂರ್ಯವಂಶಿ ಎರಡು ಸಿಕ್ಸರ್ಗಳೊಂದಿಗೆ 15 ರನ್ ಗಳಿಸಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಆದರೆ ಅಭಿಷೇಕ್ ಶರ್ಮಾ ಪಾಕಿಸ್ತಾನದ ಬೌಲರ್ಗಳ ಮೇಲೆ ಆರಂಭದಿಂದಲೇ ಒತ್ತಡ ಹೇರಿದರು.
ಅಭಿಷೇಕ್ ಕೇವಲ 28 ಎಸೆತಗಳಲ್ಲಿ 61 ರನ್ ಸಿಡಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್ ನಲ್ಲಿ ಏಳು ಸಿಕ್ಸರ್ಗಳು ಸೇರಿದ್ದವು. ಅವರ ಆಕ್ರಮಣಕಾರಿ ಬ್ಯಾಟಿಂಗ್ನಿಂದ ಭಾರತ ಪವರ್ಪ್ಲೇಯಲ್ಲೇ ಬೃಹತ್ ಮೊತ್ತದತ್ತ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ 2 ರನ್ಗೆ ನಿರ್ಗಮಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 21 ರನ್ ಗಳಿಸಿದರು. ಇಶಾನ್ ಕಿಶನ್ ಕೂಡ 20 ರನ್ಗಳ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ತಿಲಕ್ ವರ್ಮಾ 22 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು. ಶಿವಂ ದುಬೆ 15 ಎಸೆತಗಳಲ್ಲಿ 27 ರನ್ ಗಳಿಸಿದರು. ಪರಿಣಾಮ ಭಾರತ 6 ವಿಕೆಟ್ ನಷ್ಟಕ್ಕೆ 211 ರನ್ ಮೊತ್ತ ದಾಖಲಿಸಿತು.
ನವಾಜ್ ಹೋರಾಟ ವ್ಯರ್ಥ
ಗೆಲ್ಲಲು 212 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಸಾಹಿಬ್ಜಾದಾ ಫರ್ಹಾನ್ 10 ರನ್ಗೆ ವಿಕೆಟ್ ಒಪ್ಪಿಸಿದರು. ಮಾಜ್ ಸದಾಕತ್ 23 ರನ್ ಗಳಿಸಿದರೆ, ಉಸಾನ್ ಖಾನ್ ಕೇವಲ 3 ರನ್ಗೆ ಔಟಾಗಿ ನಿರ್ಗಮಿಸಿದರು. ಆದರೆ ಸೈಮ್ ಅಯೂಬ್ ಮತ್ತು ಹಸನ್ ನವಾಜ್ ತಂಡವನ್ನು ಮತ್ತೆ ಹೋರಾಟಕ್ಕೆ ತಂದರು.
ಅಯೂಬ್ 29 ರನ್ ಗಳಿಸಿ ಔಟಾದ ಬಳಿಕವೂ ಹಸನ್ ನವಾಜ್ ಪಾಕಿಸ್ತಾನದ ಗೆಲುವಿನ ನಿರೀಕ್ಷೆಯನ್ನು ಜೀವಂತವಾಗಿಟ್ಟರು. ಅವರು 51 ಎಸೆತಗಳಲ್ಲಿ 96 ರನ್ ಗಳಿಸಿ ಕೊನೆಯವರೆಗೂ ಹೋರಾಡಿದರು. ಆದರೆ ಭಾರತದ ಬೌಲರ್ಗಳು ನಿರ್ಣಾಯಕ ಹಂತದಲ್ಲಿ ವಿಕೆಟ್ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನವನ್ನು 192 ರನ್ಗಳಿಗೆ ಕಟ್ಟಿಹಾಕಿದರು. ಹೀಗಾಗಿ ಭಾರತ 19 ರನ್ಗಳ ಗೆಲುವು ದಾಖಲಿಸಿ ಏಷ್ಯನ್ ಗೇಮ್ಸೌನಲ್ಲಿ ಪುರುಷರ ಕ್ರಿಕೆಟ್ ಚಿನ್ನವನ್ನು ತನ್ನದಾಗಿಸಿಕೊಂಡಿತು.
