ಬೆಂಗಳೂರು, ಅ.3- ಕಾಂಗ್ರೆಸ್ ನಾಯಕರು ಮಾಡಿದ ಪ್ರತಿಭಟನೆಯನ್ನು ವಿರೋಧಿಸುವ ಬಿಜೆಪಿ ನಾಯಕರು, ಇದೀಗ ತಾವೇ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವದ ಹಕ್ಕಿಗಾಗಿ ಧ್ವನಿ ಎತ್ತಿದಾಗ, ಅದನ್ನು ವಿರೋಧಿಸಿ ನ್ಯಾಯಾಲಯದ ಆದೇಶದ ಬಗ್ಗೆ ಮಾತನಾಡಿದ್ದ ಬಿಜೆಪಿ ನಾಯಕರು ಇಂದು ಅದೇ ರೀತಿಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸುವ ಮೂಲಕ ತಮ ಕಪಟತನವನ್ನು ಬಯಲು ಮಾಡಿಕೊಂಡಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಸಾಮಾಜಿಕ ಜಾಲತಾಣದ ಮೂಲಕ ಟೀಕಿಸಿದ್ದಾರೆ.
ಕಾಂಗ್ರೆಸ್ ಮಾಡಿದರೆ ತಪ್ಪು, ಅದೇ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರೆ ಅದು ನ್ಯಾಯವೇ ಎಂದು ಪ್ರಶ್ನಿಸಿರುವ ರಾಮಲಿಂಗಾರೆಡ್ಡಿ, ಜನಸಾಮಾನ್ಯರು ಹಾಗೂ ಕಾಂಗ್ರೆಸ್‌ಗೆ ಒಂದು ಕಾನೂನು, ಬಿಜೆಪಿ ನಾಯಕರಿಗೆ ಮತ್ತೊಂದು ಕಾನೂನು ಎಂಬ ರೀತಿಯ ಪ್ರತ್ಯೇಕ ನೀತಿ ರಾಜ್ಯದ ಜನರಿಗೆ ತಿಳಿದಿದೆ ಎಂದು ಹೇಳಿದ್ದಾರೆ. ಚುನಾವಣಾ ಆಯುಕ್ತರು ಕೇವಲ ಮುಖವಾಡವಾಗಿದ್ದು, ತೆರೆಮರೆಯಲ್ಲಿ ಬಿಜೆಪಿ ಸರ್ಕಾರ ಮತ್ತು ಅದರ ನಾಯಕರು ಸ್ವಾರ್ಥ ಸಾಧನೆಗಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಕ್ರಮಗಳು ಪ್ರಜಾಪ್ರಭುತ್ವ ಮತ್ತು ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತವೆ. ಮತದಾರರು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ರೆಡ್ಡಿ ತಿಳಿಸಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುವ ಬದಲು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ನಾಯಕರು ನಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
