Homeರಾಜಕೀಯಫಾರಂ-7 ಷಡ್ಯಂತ್ರದ ವಿರುದ್ಧ ಕ್ರಮಕ್ಕೆ ಶಾಸಕ ಟಿ.ಡಿ.ರಾಜೇಗೌಡ ಆಗ್ರಹ

ಫಾರಂ-7 ಷಡ್ಯಂತ್ರದ ವಿರುದ್ಧ ಕ್ರಮಕ್ಕೆ ಶಾಸಕ ಟಿ.ಡಿ.ರಾಜೇಗೌಡ ಆಗ್ರಹ

ಚಿಕ್ಕಮಗಳೂರು, ಅ.3- ತಪ್ಪು ಮಾಹಿತಿ ನೀಡಿ ಫಾರಂ ನಂ. 7 ಅರ್ಜಿ ಸಲ್ಲಿಸುವ ಮೂಲಕ ಶೃಂಗೇರಿ ಕ್ಷೇತ್ರದ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಷಡ್ಯಂತ್ರ ರೂಪಿಸಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ.

ತಹಶೀಲ್ದಾರ್‌ ಕಚೇರಿಗೆ ಕಾಂಗ್ರೆಸ್‌‍ ಮುಖಂಡ ಸುದೀರ್‌ ಕುಮಾರ್‌ ಮುರೋಳಿ ದೂರು ನೀಡಿದ್ದಾರೆ. ತಹಸೀಲ್ದಾರ್‌ ಕಚೇರಿಯ ಪತ್ರದೊಂದಿಗೆ ಲಗತ್ತಿಸಲಾದ ಪಟ್ಟಿಯಲ್ಲಿ 243 ಅರ್ಹ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.

ಬಿಜೆಪಿ ಮುಖಂಡ ಹೆಚ್‌.ಕೆ. ದಿನೇಶ್‌ ಹಾಗೂ ಅವರ ಸಹಚರರು ಫಾರಂ ನಂ. 7ರ ಮೂಲಕ ತಪ್ಪು ಮಾಹಿತಿ ನೀಡಿ ಅರ್ಹ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅರ್ಹ ಮತದಾರರ ಕುರಿತ ಮಾಹಿತಿ ತಿಳಿದಿದ್ದರೂ ಜನಾಂಗೀಯ ದ್ವೇಷದ ಉದ್ದೇಶದಿಂದ ಶೃಂಗೇರಿ ಕ್ಷೇತ್ರದ ಮತದಾರರನ್ನು ಅನರ್ಹಗೊಳಿಸಲು ಕ್ರಿಮಿನಲ್‌ ಒಳಸಂಚು ರೂಪಿಸಿ ಅಕ್ರಮ ಕೂಟ ಕಟ್ಟಿಕೊಂಡಿದ್ದಾರೆ. ಪಟ್ಟಿಯಲ್ಲಿ ಉಲ್ಲೇಖಿಸಿರುವ ಹೆಸರುಗಳಲ್ಲಿ ಬಹುತೇಕ ಅಲ್ಪಸಂಖ್ಯಾತರೇ ಇದ್ದಾರೆ ಎಂದು ಅವರು ದೂರಿದ್ದಾರೆ.

ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಫಾರಂ ನಂ. 7ರ ಅರ್ಜಿಯನ್ನು ದುರುಪಯೋಗಪಡಿಸಿಕೊಂಡು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದಲ್ಲದೆ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಸಂಬಂಧಪಟ್ಟ ಕಡತವನ್ನು ಕಚೇರಿಯ ಸಿಬ್ಬಂದಿಯ ಸಹಕಾರದಿಂದ ನಾಶಪಡಿಸುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪವನ್ನೂ ಮಾಡಿರುವ ಅವರು, ಸಂಬಂಧಪಟ್ಟ ಕಡತವನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES
spot_img

Latest News