ಬೆಂಗಳೂರು,ಅ.3- ದ್ವಿತೀಯ ಪಿಯುಸಿ ಪರೀಕ್ಷಾ ಶುಲ್ಕವನ್ನು ಶೇ.50ರಷ್ಟು ಹೆಚ್ಚಿಸಿದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2026-27ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಶುಲ್ಕವನ್ನೂ ಪರಿಷ್ಕರಿಸಿದೆ. ಇದೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು 710ರಿಂದ 746ಕ್ಕೆ ಹೆಚ್ಚಿಸಲಾಗಿದ್ದು, ಒಟ್ಟಾರೆ ಶೇ.5ರಷ್ಟು ಏರಿಕೆಯಾಗಿದೆ.
KSEAB ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಪರೀಕ್ಷೆ ನಡೆಸುವ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಅನ್ವಯಿಸುವ ಪರೀಕ್ಷೆ, ನೋಂದಣಿ ಹಾಗೂ ಮರುಪರೀಕ್ಷಾ ಶುಲ್ಕಗಳನ್ನು ಪರಿಷ್ಕರಿಸಲಾಗಿದೆ. ರಾಜ್ಯದಲ್ಲಿ ಪ್ರತಿವರ್ಷ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳವು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಖಾಸಗಿ ಅಭ್ಯರ್ಥಿಗಳಿಗೂ ಶುಲ್ಕ ಹೆಚ್ಚಳ :
ಖಾಸಗಿ ಅಭ್ಯರ್ಥಿಗಳ ನೋಂದಣಿ ಮತ್ತು ಅರ್ಜಿ ಶುಲ್ಕ 248ರಿಂದ 260ಕ್ಕೆ ಏರಿಕೆಯಾಗಿದೆ. ಈಗಾಗಲೇ ನೋಂದಾಯಿಸಿಕೊಂಡು ಮರುಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕವನ್ನು 72ರಿಂದ 76ಕ್ಕೆ ಪರಿಷ್ಕರಿಸಲಾಗಿದೆ.
ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೂ ಹೊಸ ಶುಲ್ಕ ಅನ್ವಯವಾಗಲಿದೆ. ಒಂದು ವಿಷಯಕ್ಕೆ 448ರಿಂದ 470ಕ್ಕೆ, ಎರಡು ವಿಷಯಗಳಿಗೆ 559ರಿಂದ 587ಕ್ಕೆ ಹಾಗೂ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 752ರಿಂದ 790ಕ್ಕೆ ಶುಲ್ಕ ಹೆಚ್ಚಿಸಲಾಗಿದೆ.
ಪಿಯುಸಿ ಶುಲ್ಕ ಏರಿಕೆ ಬೆನ್ನಲ್ಲೇ ಎಸ್ಎಸ್ಎಲ್ಸಿ ಮೇಲೂ ಹೊರೆ :
ಎಸ್ಎಸ್ಎಲ್ಸಿ ಶುಲ್ಕ ಪರಿಷ್ಕರಣೆಗೂ ಮುನ್ನವೇ ದ್ವಿತೀಯ ಪಿಯುಸಿ ಪರೀಕ್ಷಾ ಶುಲ್ಕದಲ್ಲಿ ಸುಮಾರು ಎಂಟು ವರ್ಷಗಳ ಬಳಿಕ ಶೇ.50ರಷ್ಟು ಹೆಚ್ಚಳ ಮಾಡಲಾಗಿತ್ತು. ಹೊಸ ಹಾಗೂ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು 400ರಿಂದ 600ಕ್ಕೆ ಹೆಚ್ಚಿಸಲಾಗಿತ್ತು. ಇದರ ಜತೆಗೆ ಅಂಕಪಟ್ಟಿ ವಿತರಣೆ, ಪರಿಶೀಲನೆ ಸೇರಿದಂತೆ ವಿವಿಧ ಸೇವೆಗಳ ಶುಲ್ಕಗಳನ್ನೂ ಪರಿಷ್ಕರಿಸಲಾಗಿತ್ತು.
ವೆಚ್ಚ ಹೆಚ್ಚಳವೇ ಕಾರಣ :
ಆದರೆ, ಪರೀಕ್ಷಾ ಶುಲ್ಕ ಪರಿಷ್ಕರಣೆಗೆ ಪರೀಕ್ಷೆ ನಡೆಸುವ ವೆಚ್ಚದಲ್ಲಿ ಆಗಿರುವ ಹೆಚ್ಚಳವೇ ಕಾರಣ ಎಂದು ಕೆಎಸ್ಇಎಬಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಪರೀಕ್ಷಾ ವ್ಯವಸ್ಥೆಯ ನಿರ್ವಹಣೆ, ಮೌಲ್ಯಮಾಪನ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದ ವೆಚ್ಚಗಳನ್ನು ಪರಿಗಣಿಸಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ ಎಂಬುದು ಮಂಡಳಿಯ ನಿಲುವಾಗಿದೆ.
