ಬೆಂಗಳೂರು,ಅ.3- ಎಸ್‌ಐಆರ್ ಪ್ರಕ್ರಿಯೆ ವೇಳೆ ಫಾರಂ 7 ಸಲ್ಲಿಸಿರುವವರ ವಿರುದ್ದ ಅನಗತ್ಯವಾಗಿ ಎಫ್‌ಐಆರ್ ದಾಖಲಿಸದಂತೆ ಕೆಳಹಂತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎ.ಸಲೀಂ ಅವರಿಗೆ ಮನವಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್, ಶಾಸಕರಾದ ರಘು, ಕೆ.ಗೋಪಾಲಯ್ಯ, ಎಂ.ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ಡಾ.ಅಶ್ವತ್ಥನಾರಾಯಣ, ರಾಮಮೂರ್ತಿ, ಭೈರತಿ ಬಸವರಾಜ ಸೇರಿದಂತೆ ಮತ್ತಿತರ ನಿಯೋಗವು ಮನವಿಪತ್ರ ಸಲ್ಲಿಸಿತು.
ನಮೂನೆ-7ರಲ್ಲಿ ಉಲ್ಲೇಖಿಸಲಾದ ಕಾರಣಗಳು ಮತ್ತು ವಿವರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮತದಾರರ ನೋಂದಣಿ ಅಧಿಕಾರಿ ಹಾಗೂ ಸಂಬಂಧಿತ ಚುನಾವಣಾ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಹೀಗಾಗಿ ಬಹು ಸಂಖ್ಯೆಯಲ್ಲಿ ನಮೂನೆ-7 ಅರ್ಜಿಗಳನ್ನು ಸಲ್ಲಿಸಿರುವುದೇ ಸ್ವತಃ ಯಾವುದೇ ಕ್ರಿಮಿನಲ್ ಅಪರಾಧವಾಗುವುದಿಲ್ಲ. ಕಾನೂನಿನಲ್ಲಿಯೇ ಈಗಾಗಲೇ ನಿಗದಿತ ವ್ಯವಸ್ಥೆ ಇದೆ ಎಂದು ಹೇಳಿದೆ.
ನಮೂನೆ-7ರಲ್ಲಿ ನೀಡಿರುವ ಘೋಷಣೆಗಳ ಸತ್ಯಾಸತ್ಯತೆ ಕುರಿತ ಆರೋಪಗಳು ಮೂಲತಃ ಮತದಾರರ ಪಟ್ಟಿಗೆ ಸಂಬಂಧಿಸಿದ ಕಾನೂನುಬದ್ಧ ವ್ಯವಸ್ಥೆಯೊಳಗೆ ಪರಿಶೀಲನೆಗೊಳಪಡಬೇಕಾದ ವಿಷಯಗಳಾಗಿವೆ.
ಅದ್ದರಿಂದ, ಇಂತಹ ಆರೋಪಗಳನ್ನು ಮೊದಲು ಜನಪ್ರತಿನಿಧಿತ್ವ ಕಾಯ್ದೆ, 1950 ಹಾಗೂ ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ನಿಗದಿಪಡಿಸಿರುವ ಪರಿಶೀಲನೆ ಮತ್ತು ವಿಚಾರಣಾ ಪ್ರಕ್ರಿಯೆಯ ಮೂಲಕ ಸಂಬಂಧಿತ ಚುನಾವಣಾ ಪ್ರಾಧಿಕಾರವೇ ಪರಿಶೀಲಿಸಬೇಕು ಎಂದು ಕೋರಿದೆ. ಕರಡು ಮತದಾರರ ಪಟ್ಟಿಯಲ್ಲಿ ಕೈಗೊಳ್ಳಬೇಕಾದ ತಿದ್ದುಪಡಿಗಳನ್ನು ಗುರುತಿಸುವ ಉದ್ದೇಶದಿಂದ ಫಾರಂ-7 ಅರ್ಜಿಗಳನ್ನು ಸಾಮೂಹಿಕವಾಗಿ ಸಲ್ಲಿಸಲು ನಿರ್ದಿಷ್ಟವಾಗಿ ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ, ಫಾರಂ-7 ಅರ್ಜಿಗಳನ್ನು ಸಾಮೂಹಿಕವಾಗಿ ಸಲ್ಲಿಸುವುದಕ್ಕೆ ಯಾವುದೇ ಸಂಪೂರ್ಣ ನಿಷೇಧವಿಲ್ಲ. 16.01.2026 23/ಡಬ್ಲ್ಯು/ ಇಎಸ್-ಣಣ/2025 (ಎಸ್‌ಐಆರ್) ಫಾರಂ-7 ಇವನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ಮತದಾರರ ನೋಂದಣಿ ಅಧಿಕಾರಿ (ಇಆರ್‌ಒ) / ಸಹಾಯಕ ಮತದಾರರ ನೋಂದಣಿ ಅಧಿಕಾರಿ (ಎಇಆರ್‌ಒ) ಅವರ ಮುಂದೆ ಸಲ್ಲಿಸಬಹುದಾದ ನಮೂನೆ-7 ಅರ್ಜಿಗಳ ಸಂಖ್ಯೆಗೆ ಯಾವುದೇ ನಿಗದಿತ ಮಿತಿಯನ್ನೂ ವಿಧಿಸಲಾಗಿಲ್ಲ.
ಮ್ಯಾನ್ಯುಯಲ್ ಎಲೊಕ್ಟೋರಲ್ ರೋಲ್‌್ಸ 2023ರ ಪ್ಯಾರಾ 11.4.5ರ ಪ್ರಕಾರ, ಇಂತಹ ಎಲ್ಲಾ ಆಕ್ಷೇಪಣೆಗಳನ್ನು ಮರುಪರಿಶೀಲನೆ ಹಾಗೂ ಪರಸ್ಪರ ದೃಢೀಕರಣಕ್ಕೆ ಒಳಪಡಿಸಬೇಕಾಗುತ್ತದೆ. ಆದ್ದರಿಂದ, ನಿಗದಿತ ಕಾರ್ಯವಿಧಾನಕ್ಕೆ ಅನುಗುಣವಾಗಿ ಆಗತ್ಯವಿರುವಷ್ಟು ಬಹು ಸಂಖ್ಯೆಯ ನಮೂನೆ-7 ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ನಿಯೋಗ ಸಮರ್ಥನೆ ಮಾಡಿಕೊಂಡಿದೆ.
