ಬೆಂಗಳೂರು, ಅ.3- ಸಾರ್ವಜನಿಕರ ಅನುಕೂಲಕ್ಕಾಗಿ ಇಂದಿನಿಂದ ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿವರೆಗೆ ವಿಸ್ತರಿಸಲಾಗಿದೆ. ವಿವಿಧ ಮಾರ್ಗಗಳ ಟರ್ಮಿನಲ್ ನಿಲ್ದಾಣಗಳಿಂದ ಸಾಮಾನ್ಯ ವೇಳಾಪಟ್ಟಿಗಿಂತ ತಡವಾಗಿ ಕೊನೆಯ ರೈಲುಗಳು ಹೊರಡಲಿದ್ದು, ಪ್ರಯಾಣಿಕರು ಕೊನೆಯ ರೈಲಿನ ಸಮಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಯೋಜಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಸೂಚಿಸಿದೆ.
ನೇರಳೆ ಮಾರ್ಗದಲ್ಲಿ ವೈಟ್ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ ರಾತ್ರಿ 12 ಗಂಟೆಗೆ ಹಾಗೂ ಚಲ್ಲಘಟ್ಟದಿಂದ 12.20ಕ್ಕೆ ಕೊನೆಯ ರೈಲು ಹೊರಡಲಿದೆ.ಹಸಿರು ಮಾರ್ಗದಲ್ಲಿ ಮಾದಾವರದಿಂದ 12.15ಕ್ಕೆ ಹಾಗೂ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ 12.20ಕ್ಕೆ ಕೊನೆಯ ರೈಲು ಸಂಚರಿಸಲಿದೆ.ಹಳದಿ ಮಾರ್ಗದಲ್ಲಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ರಾತ್ರಿ 11.55ಕ್ಕೆ ಕೊನೆಯ ರೈಲು ಹೊರಡಲಿದ್ದು, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ಕಡೆಗೆ ಕೊನೆಯ ರೈಲು ರಾತ್ರಿ 1.15ಕ್ಕೆ ಹೊರಡಲಿದೆ.
ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಕೊನೆಯ ಸಂಪರ್ಕ ರೈಲು 12.55ಕ್ಕೆ ಹೊರಡಲಿದೆ.ಟಿಕೆಟ್ ಕೌಂಟರ್ಗಳಲ್ಲಿ ಜನದಟ್ಟಣೆ ತಪ್ಪಿಸಲು ಪ್ರಯಾಣಿಕರು ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ ಕಾರ್ಡ್ ಬಳಸುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ. ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಮೆಟ್ರೋ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ.
ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆಗೆ ಸಿಎಂ ಸೂಚನೆ: ಪಿಂಕ್ ಲೈನ್ನ – ಮೆಟ್ರೋ ನಿಲ್ದಾಣದ ಹೆಸರನ್ನು ಬಿಳೇಕಹಳ್ಳಿ ಎಂದು ಬದಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಿಳೇಕಹಳ್ಳಿ ಪ್ರದೇಶದ ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು, ಮೆಟ್ರೋ ನಿಲ್ದಾಣದ ಹೆಸರಿನಲ್ಲಿ ಸ್ಥಳೀಯ ಪ್ರದೇಶದ ಹೆಸರನ್ನೂ ಸೇರಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರ ಬೇಡಿಕೆ ಹಾಗೂ ಪ್ರದೇಶದ ಹಿನ್ನೆಲೆಯನ್ನು ಪರಿಗಣಿಸಿ ನಿಲ್ದಾಣದ ಹೆಸರು ಬದಲಿಸುವಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.
