Homeಬೆಂಗಳೂರುಬೆಂಗಳೂರಲ್ಲಿ ಪೇಂಟರ್‌ನಿಂದ ಕಾರ್ಪೆಂಟರ್‌ ಕೊಲೆ

ಬೆಂಗಳೂರಲ್ಲಿ ಪೇಂಟರ್‌ನಿಂದ ಕಾರ್ಪೆಂಟರ್‌ ಕೊಲೆ

ಬೆಂಗಳೂರು, ಅ.4- ಅಡುಗೆಯನ್ನು ಚೆನ್ನಾಗಿ ಮಾಡಲಿಲ್ಲ ಎಂದು ಕೋಪಗೊಂಡು ಜಗಳ ಮಾಡಿದ ಪೇಂಟರ್‌, ಕಾರ್ಪೆಂಟರ್‌ ಒಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆರ್‌.ಆರ್‌.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಆರ್‌.ಆರ್‌.ನಗರದ ಕೆಂಚೇನಹಳ್ಳಿಯಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ರಾತ್ರಿ 11.30ರ ಸಮಯದಲ್ಲಿ ಈ ಕೊಲೆ ನಡೆದಿದೆ. ಉತ್ತರ ಪ್ರದೇಶದ ಗೋರಖ್‌ಪುರದ ನಿವಾಸಿ ಅಮಿತ್‌ ಕುಮಾರ್‌ (22) ಕೊಲೆಯಾದ ಕಾರ್ಪೆಂಟರ್‌. ಕೊಲೆಯ ಆರೋಪಿ ಪೇಂಟರ್‌ ಸುನಿಲ್‌ ಕುಮಾರ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಗೋರಖ್‌ಪುರದ ಮೂವರು ಕಾರ್ಪೆಂಟರ್‌ಗಳು ಹಾಗೂ ಪೇಂಟರ್‌ ಸುನಿಲ್‌ ಕುಮಾರ್‌ ಕೆಂಚೇನಹಳ್ಳಿಯ ನಿರ್ಮಾಣ ಹಂತದ ಮನೆಯಲ್ಲಿ ಕೆಲಸ ಮಾಡಿಕೊಂಡು, ಅಲ್ಲೇ ಉಳಿದುಕೊಂಡಿದ್ದರು.ರಾತ್ರಿ ಕುಡಿದು ಬಂದಿದ್ದ ಪೇಂಟರ್‌ ಸುನಿಲ್‌ ಕುಮಾರ್‌, ಅಡುಗೆಯನ್ನು ಚೆನ್ನಾಗಿ ಮಾಡಿಲ್ಲ ಎಂದು ಅಮಿತ್‌ ಕುಮಾರ್‌ ಜೊತೆ ಜಗಳವಾಡಿ ನಿಂದಿಸಿದ್ದನು. ಜಗಳ ವಿಕೋಪಕ್ಕೆ ಹೋದಾಗ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡ ಸುನಿಲ್‌ ಕುಮಾರ್‌ ಕಾರ್ಪೆಂಟರ್‌ ಅಮಿತ್‌ ಕುಮಾರ್‌ ಹೊಟ್ಟೆಗೆ ಇರಿದಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಅಮಿತ್‌ ಕುಮಾರ್‌ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಆರ್‌.ಆರ್‌.ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News