ಅಬುಧಾಬಿ, ಅ.5- ಫ್ಲೈ ದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸಿತ್ ಮಚ್ಚರ್ ಮೇಲೆ ದಾಳಿ ನಡೆಸಿದ ಕೋ-ಪೈಲಟ್ ಹಮಾಮ್ ಅಲ್‌ಹಮ್ಮಾಮಿ ವಿಮಾನ ಪತನದಂತಹ ನೀಚ ಕಾರ್ಯವನ್ನು ಕಳೆದ ಜುಲೈನಲ್ಲಿ ಯೋಜಿಸಲು ತೀರ್ಮಾನಿಸಿದ್ದ ಎನ್ನಲಾಗಿದೆ.
ತನಿಖಾಧಿಕಾರಿಗಳ ತೀವ್ರ ವಿಚಾರಣೆ ವೇಳೆ ಹಮಾಮಿ ತನ್ನ ಈ ಯೋಜನೆಯನ್ನು ತಿಳಿಸಿದ್ದಾನೆ ಎಂದು ಕೆಲ ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಟೆಲ್ ಅವೀವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಬಳಿ ವಿಮಾನವನ್ನು ಅಪ್ಪಳಿಸುವ ಉದ್ದೇಶ ಹೊಂದಿದ್ದಾಗಿ ಆತ ಹೇಳಿದ್ದಾನೆ ಎಂದು ವರದಿಯಾಗಿದೆ.
ಈ ಯೋಜನೆಯನ್ನು ಜುಲೈನಲ್ಲೇ ನಡೆಸಲು ಉದ್ದೇಶಿಸಿದ್ದ, ಆದರೆ ಕೆಲವು ಕಾರಣಗಳಿಂದ ಆ ಯೋಜನೆಯನ್ನು ಮುಂದೂಡಿದ್ದ ಎನ್ನಲಾಗಿದೆ. ಅಂದು ಆ ವಿಮಾನದಲ್ಲಿ ಆತನ ಗೆಳೆಯ ಕೂಡಾ ಇದ್ದ ಕಾರಣ, ಅಂದು ದಾಳಿ ನಡೆಸದೆ ಮುಂದೂಡಿದ್ದ ಎನ್ನಲಾಗಿದೆ. ಫ್ಲೈ ದುಬೈಗೆ ಸೇರುವ ಮುನ್ನವೇ ದಾಳಿಯ ಯೋಜನೆ ರೂಪಿಸಿದ್ದಾಗಿ ತನಿಖಾಧಿಕಾರಿಗಳಿಗೆ ಹೇಳಿದ್ದಾನೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಈ ಯೋಜನೆಯನ್ನು ಫ್ಲೈ ದುಬೈಗೆ ಸೇರುವ ಮೊದಲೇ ರೂಪಿಸಿದ್ದನೇ ಎಂಬುದೂ ತನಿಖೆಯ ಪ್ರಮುಖ ಭಾಗವಾಗಿದೆ. ಜೂನ್‌ನಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದ ವೇಳೆ ದಾಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದಾನೆ ಎಂಬ ಆರೋಪಗಳೂ ವರದಿಗಳಲ್ಲಿವೆ.
ಅದೇ ವೇಳೆ, ಹಮ್ಮಾಮಿಯ ಹಿನ್ನೆಲೆ ಮತ್ತು ಆತನಿಗೆ ವಿಮಾನ ಹಾರಿಸಲು ಅನುಮತಿ ಹೇಗೆ ದೊರೆಯಿತು ಎಂಬ ಪ್ರಶ್ನೆಗಳೂ ಎದ್ದಿವೆ. ಆತನ ವಿರುದ್ಧ ಈ ಹಿಂದೆ ಭದ್ರತಾ ಕಳವಳಗಳಿದ್ದವು ಎಂಬ ವರದಿಗಳ ಹಿನ್ನೆಲೆಯಲ್ಲಿ ಯುಎಇ ಮತ್ತು ಇತರ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಎಲ್ಲಾ ವಿವರಗಳು ತನಿಖಾ ಮೂಲಗಳು ಮತ್ತು ಮಾಧ್ಯಮ ವರದಿಗಳ ಆಧಾರದಲ್ಲಿವೆ. ಪ್ರಕರಣದ ಅಂತಿಮ ತನಿಖಾ ವರದಿ ಇನ್ನೂ ಹೊರಬರಬೇಕಿದೆ.
