Homeರಾಜ್ಯಕೆಪಿಎಸ್‌‍ಸಿ ಕರ್ಮಕಾಂಡ : ಅಂಕಗಳ ಮಾಹಿತಿ ತಡೆಹಿಡಿದು ಲಂಚದ ಡೀಲ್

ಕೆಪಿಎಸ್‌‍ಸಿ ಕರ್ಮಕಾಂಡ : ಅಂಕಗಳ ಮಾಹಿತಿ ತಡೆಹಿಡಿದು ಲಂಚದ ಡೀಲ್

ಬೆಂಗಳೂರು,ಅ.5- ಕರ್ನಾಟಕ ಲೋಕಸೇವಾ ಆಯೋಗದ ನೇಮ ಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಅಂಕಗಳ ಮಾಹಿತಿಯನ್ನು ಉದ್ದೇಶ ಪೂರ್ವಕ ವಾಗಿ ತಡೆಹಿಡಿದು, ಅದನ್ನೇ ಲಂಚದ ಮಾತುಕತೆಗೆ ಬಳಸಲಾಗುತ್ತಿತ್ತೆಂಬ ಗಂಭೀರ ಆರೋಪ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಾಜಿ ಕೆಪಿಎಸ್‌‍ಸಿ ಪರೀಕ್ಷಾ ನಿಯಂತ್ರಕ, ಐಎಎಸ್‌‍ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರ ಬಂಧನದ ಬಳಿಕ ಜಾರಿ ನಿರ್ದೇಶನಾಲಯ ಈ ಅಂಶಗಳನ್ನು ವಿಶೇಷ ನ್ಯಾಯಾಲಯದ ಗಮನಕ್ಕೆ ತಂದಿದೆ.

2024ರಿಂದ 2026ರವರೆಗೆ ಗಂಗ್ವಾರ್‌ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದ 13 ನೇಮಕಾತಿ ಪ್ರಕ್ರಿಯೆಗಳಲ್ಲೂ ವ್ಯವಸ್ಥಿತವಾಗಿ ಅಕ್ರಮ ಹಣ ವಸೂಲಿ ನಡೆದಿದೆಯೇ ಎಂಬುದನ್ನು ತನಿಖೆ ಮಾಡಬೇಕಿದೆ ಎಂದು ಇ ಡಿ ನ್ಯಾಯಾಲಯಕ್ಕೆ ತಿಳಿಸಿದೆ. ಪ್ರತಿ ಹುದ್ದೆಗೆ ಮೂವರು ಅಭ್ಯರ್ಥಿಗಳನ್ನು ಒಳಗೊಂಡಿರುವ 1:3 ಅರ್ಹತಾ ಪಟ್ಟಿಯಲ್ಲಿ ಸಾಮಾನ್ಯವಾಗಿ ಅಭ್ಯರ್ಥಿಗಳ ಹೆಸರು ಮತ್ತು ರೋಲ್‌ ನಂಬರ್‌ಗಳಿದ್ದರೂ, ಅಂಕಗಳನ್ನು ಬಹಿರಂಗಪಡಿಸದಿರುವ ಪದ್ಧತಿ ಜಾರಿಯಲ್ಲಿತ್ತು ಎಂದು ಇ ಡಿ ಹೇಳಿದೆ.

ಇದರಿಂದ ಅಭ್ಯರ್ಥಿಯ ನಿಖರ ಸ್ಥಾನಮಾನವನ್ನು ಸಾರ್ವ ಜನಿಕವಾಗಿ ತಿಳಿದುಕೊಳ್ಳಲು ಸಾಧ್ಯವಾಗು ತ್ತಿರಲಿಲ್ಲ. ಆದರೆ ಕೆಪಿಎಸ್‌‍ಸಿಯೊಳಗಿನ ಕೆಲವರು ಗಂಗ್ವಾರ್‌ ಅವರಿಂದ ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ಅಂಕಗಳ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಅಭ್ಯರ್ಥಿಯ ಆಯ್ಕೆಯ ಸಾಧ್ಯತೆ ಎಷ್ಟಿದೆ ಎಂಬುದು ತಿಳಿದ ಬಳಿಕ, ಸಂಬಂಧಪಟ್ಟ ಅಧಿಕಾರಿ, ಸದಸ್ಯ ಅಥವಾ ಮಧ್ಯವರ್ತಿ ಅಭ್ಯರ್ಥಿಯನ್ನು ಸಂಪರ್ಕಿಸಿ ಲಂಚದ ಮೊತ್ತದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದಷ್ಟೂ ಬೇಡಿಕೆಯ ಮೊತ್ತವೂ ಹೆಚ್ಚಾಗುತ್ತಿತ್ತು ಎಂದು ಉಈ ನ್ಯಾಯಾಲಯಕ್ಕೆ ತಿಳಿಸಿದೆ.

ಪಶುವೈದ್ಯಾಧಿಕಾರಿ ನೇಮಕಾತಿ ಯಲ್ಲೂ ಇದೇ ಮಾದರಿ? :
400 ಪಶುವೈದ್ಯಾಧಿಕಾರಿಗಳ ನೇಮಕಾತಿಗಾಗಿ 2026ರ ಜನವರಿ 8 ಮತ್ತು 9ರಂದು ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಗಂಗ್ವಾರ್‌ ಪ್ರಮುಖ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಮಧ್ಯವರ್ತಿಯೊಬ್ಬರು ಕನಿಷ್ಠ 20 ಅಭ್ಯರ್ಥಿಗಳಿಂದ ತಲಾ 20 ಲಕ್ಷದಿಂದ 40 ಲಕ್ಷದವರೆಗೆ ಹಣ ಸಂಗ್ರಹಿಸಿದ್ದರೆಂಬ ಆರೋಪವನ್ನು ಇಡಿ ಮುಂದಿಟ್ಟಿದೆ.

ಫೆಬ್ರವರಿ 4ರಂದು ಪಶು ವೈದ್ಯಾಧಿಕಾರಿಗಳ 1:3 ಅರ್ಹತಾ ಪಟ್ಟಿ ಪ್ರಕಟವಾದ ಬಳಿಕ, ಅಮಾನತುಗೊಂಡ ಕೆಪಿಎಸ್‌‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಸೇರಿದಂತೆ ಕೆಲ ಅಧಿಕಾರಿಗಳು ಅಭ್ಯರ್ಥಿಗಳ ಆಯ್ಕೆಯ ಸಾಧ್ಯತೆಗಳನ್ನು ತಿಳಿದುಕೊಳ್ಳಲು ಗಂಗ್ವಾರ್‌ ಅವರನ್ನು ಸಂಪರ್ಕಿಸಿದ್ದರು ಎಂದು ವಿಚಾರಣೆಯಲ್ಲಿ ಗಂಗ್ವಾರ್‌ ಹೇಳಿಕೆ ನೀಡಿದ್ದಾರೆ ಎಂದು ಇ ಡಿ ತಿಳಿಸಿದೆ. ಬಿ.ವಿ.ಗೀತಾ, ಶಾಂತಾ ಹೊಸಮನಿ, ಎಲ್ಫ್ರೆಡಾ ಡಿ ಸಿಲ್ವಾ ಸೇರಿದಂತೆ ಕೆಲ ಸದಸ್ಯರುಗಳ ಹೆಸರುಗಳನ್ನೂ ತನಿಖೆಯ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ.ಅಧಿಕಾರಿಯೊಬ್ಬರ ನಿವಾಸದಿಂದ ವಶಪಡಿಸಿಕೊಂಡ ಕೈಬರಹದ ಟಿಪ್ಪಣಿಗಳಲ್ಲಿ ಲಂಚ ನೀಡಿದರೂ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾದ ಅಭ್ಯರ್ಥಿಗಳ ವಿವರಗಳಿದ್ದವು ಎಂದು ಇಡಿ ಹೇಳಿದೆ.

13 ನೇಮಕಾತಿಗಳತ್ತ ಇ ಡಿ ಕಣ್ಣು :
ಗಂಗ್ವಾರ್‌ ಅವರ ಅವಧಿಯಲ್ಲಿ ನಡೆದ 13 ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ ಹಣ ಸಂಗ್ರಹವಾಗಿದೆಯೇ, ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದಾರೆ ಮತ್ತು ಹಣದ ವಹಿವಾಟು ಹೇಗೆ ನಡೆದಿದೆ? ಎಂಬುದರ ಕುರಿತು ಸಮಗ್ರ ತನಿಖೆ ಅಗತ್ಯವಿದೆ ಎಂದು ಇ ಡಿ ವಾದಿಸಿದೆ. ಆದರೆ, ಉಳಿದ 13 ನೇಮಕಾತಿ ಪ್ರಕ್ರಿಯೆಗಳಿಗೆ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿಲ್ಲದ ಕಾರಣ ಪಿಎಂಎಲ್‌ಎ ಅಡಿಯಲ್ಲಿ ಇ ಡಿ ತನಿಖೆಯ ವ್ಯಾಪ್ತಿ ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕರಣಕ್ಕೆ ಮಾತ್ರ ಸೀಮಿತವಾಗಬೇಕು ಎಂದು ಗಂಗ್ವಾರ್‌ ಪರ ವಕೀಲರು ವಾದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಗಂಗ್ವಾರ್‌ ಅವರ ಅಧಿಕಾರಾವಧಿಯಲ್ಲಿ ನಡೆದ ವಿವಿಧ ನೇಮಕಾತಿ ಪ್ರಕ್ರಿಯೆಗಳು ನಿರಂತರ ಅಕ್ರಮ ಹಣ ವರ್ಗಾವಣೆ ಅಪರಾಧದ ಭಾಗವಾಗಿರಬಹುದು ಎಂದು ಇ ಡಿ ಪ್ರತಿಪಾದಿಸಿದೆ.

RELATED ARTICLES
spot_img

Latest News