ಬೆಂಗಳೂರು,ಅ.5- ರಾಜಧಾನಿ ಬೆಂಗಳೂರಿನಲ್ಲಿಂದು ಮಧ್ಯಾಹ್ನ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ನಾಲ್ಕೈದು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಇಂದು ಮಧ್ಯಾಹ್ನ ಹಲವೆಡೆ ಸಾಧಾರಣ ಮಳೆಯಾಗಿತ್ತು. ಮಧ್ಯಾಹ್ನ 3 ಗಂಟೆಯ ನಂತರ ಮತ್ತೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯಿತು. ಇದರಿಂದ ರಸ್ತೆಗಳು ನೀರು ತುಂಬಿ ಕಾಲುವೆಗಳಂತಾದವು.
ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ರಾಜಾಜಿನಗರ, ಮೆಜೆಸ್ಟಿಕ್, ಗಾಂಧಿನಗರ, ಮಲ್ಲೇಶ್ವರ, ಶಿವಾಜಿನಗರ, ಸಂಪಂಗಿ ರಾಮನಗರ, ವಿಜಯನಗರ, ಯಶವಂತಪುರ, ಮಹಾಲಕ್ಷ್ಮಿಲೇಔಟ್, ಬಸವೇಶ್ವರನಗರ, ಕೆ.ಆರ್.ಪುರ, ಜಕ್ಕೂರು, ಹೆಬ್ಬಾಳ ಸೇರಿದಂತೆ ನಗರದ ಬಹುತೇಕ ಕಡೆ ಮಳೆಯಾಯಿತು.
ಕೆಲವೆಡೆ ಮೇಲೈ ಬಲವಾದ ಗಾಳಿಯೂ ಬೀಸಿದೆ. ಮತ್ತೆ ಕೆಲವೆಡೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದೆ. ದಿಢೀರನೆ ಬಂದ ಧಾರಾಕಾರ ಮಳೆ ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತು.
ಸಂಚಾರ ದಟ್ಟಣೆ ಹೆಚ್ಚಾಗಿದ್ದ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಹೈರಾಣರಾದರು. ಮಳೆಯಲ್ಲಿಯೇ ತಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವ ಅನಿವಾರ್ಯತೆ ಇದ್ದವು ರೈನ್‌ಕೋಟ್, ಕೊಡೆಗಳ ಆಶ್ರಯ ಪಡೆದಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಬಿದ್ದ ಮಳೆ ಬೆಂಗಳೂರಿಗರಿಗೆ ತಂಪೆರೆದಂತಾಯಿತು. ಆದರೆ ಸಂಜೆ ವೇಳೆ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ತೆರಳುವವರು ಪರದಾಡುವಂತಾಯಿತು.
