ಬೆಂಗಳೂರು,ಅ.5- ಕುವೈತ್‌ನಿಂದ ವಿಮಾನದಲ್ಲಿ ನಗರಕ್ಕೆ ಬಂದ ಪ್ರಯಾಣಿಕರೊಬ್ಬರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮಡಕೇರಿಯ ಸುಂಟಿಕೊಪ್ಪದ ಬಶೀರ್ ಮೃತ ಪ್ರಯಾಣಿಕನಾಗಿದ್ದು,ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕುಟುಂಬದವರನ್ನು ಭೇಟಿ ಮಾಡಲು ಬಂದಾಗ ಅಚಾನಕ್ ಈ ದುರಂತ ನಡೆದಿದೆ. ಹಲವು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದರು. ತಾವು ದುಡಿದ ಹಣವನ್ನು ಸುಂಟಿಕೊಪ್ಪ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ವಾಸವಿರುವ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕಳುಹಿಸುತ್ತಿದ್ದರು.
ವರ್ಷಗಳ ಬಳಿಕ ಸಿಕ್ಕ ರಜೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಬೇಕೆಂಬ ಆಸೆಯಿಂದ ಬಶೀರ್ ಕುವೈತ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಆದರೆ, ವಿಧಿಯಾಟವೇ ಬೇರೆಯಾಗಿತ್ತು.
ಶನಿವಾರ ಮುಂಜಾನೆ ಕುವೈತ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಹೊರಗೆ ಹೋಗುವಾಗ ಬಶೀರ್ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತಕ್ಕೊಳಗಾಗಿ ವಿಮಾನ ನಿಲ್ದಾಣದಲ್ಲೇ ಕುಸಿದು ಕೊನೆಯುಸಿರೆಳೆದಿದ್ದಾರೆ. ವಿಮಾನ ನಿಲ್ದಾಣ ಅಧಿಕಾರಿಗಳು ಪ್ರಯಾಣಿಕನ ವಿವರ ಕಲೆಹಾಕಿ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಬೆಂಗಳೂರಿನಿಂದ ಮೃತದೇಹವನ್ನು ಸುಂಟಿಕೊಪ್ಪಕ್ಕೆ ಕಳುಹಿಸಲಾಗಿದೆ.
