ಮೈಸೂರು,ಅ.7- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಗಜಪಡೆಗೆ ಮೊದಲ ಹಂತದ ಕುಶಾಲತೋಪು ತಾಲೀಮು ನಡೆಸಿದ್ದು, ಶಬ್ಧಕ್ಕೆ ಗಜಪಡೆ ಅಂಜದೆ, ಅಳುಕದೆ ಗಾಂಭೀರ್ಯದಿಂದ ನಿಂತು ಸಹಕರಿಸಿದವು. ಇಂದು ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ತಾಲೀಮಿನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಪಿರಂಗಿ ಗಾಡಿಗಳ ಮೂಲಕ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿ ತಾಲೀಮು ನಡೆಸಿದರು.
ತಾಲೀಮಿನಲ್ಲಿ ಅಶ್ವದಳದ 43 ಕುದುರೆಗಳು ಹಾಗೂ ದಸರಾ ಗಜಪಡೆಯ 13 ಆನೆಗಳಾದ ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವಾ, ಏಕಲವ್ಯ, ಶ್ರೀರಾಮ, ಗೋಪಿ, ಕಾವೇರಿ, ಲಕ್ಷ್ಮಿ, ಚೈತ್ರಾ, ರೂಪಾ ಮತ್ತು ಶ್ರೀಕಂಠ ಆನೆಗಳು ಭಾಗವಹಿಸಿದ್ದವು. ಕುಶಾಲತೋಪಿನ ಭಾರೀ ಸದ್ದಿಗೂ ಹೆದರದೆ ಆನೆಗಳು ಹಾಗೂ ಕುದುರೆಗಳು ಶಿಸ್ತಿನಿಂದ ನಿಂತಿದ್ದು, ಮೊದಲ ಹಂತದ ತಾಲೀಮು ಯಶಸ್ವಿಯಾಯಿತು. ಈ ವೇಳೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಹರ್ಷಪ್ರಿಯಾ ವಧಾ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
