Homeರಾಜ್ಯಕುಟುಕು ಕಾರ್ಯಾಚರಣೆ : ಎಚ್ಚರಿಕೆಯಿಂದ ಇರುವಂತೆ ಸಚಿವರಿಗೆ ಸಿಎಂ ಡಿಕೆಶಿ ಎಚ್ಚರಿಕೆ

ಕುಟುಕು ಕಾರ್ಯಾಚರಣೆ : ಎಚ್ಚರಿಕೆಯಿಂದ ಇರುವಂತೆ ಸಚಿವರಿಗೆ ಸಿಎಂ ಡಿಕೆಶಿ ಎಚ್ಚರಿಕೆ

ಬೆಂಗಳೂರು, ಅ.7- ಸಂಪುಟದ ಐದಾರು ಮಂದಿ ಸಚಿವರ ವಿರುದ್ಧ ಖಾಸಗಿ ಸಂಸ್ಥೆಗಳು ಹಾಗೂ ಕೆಲವು ರಾಜಕೀಯ ಪಕ್ಷಗಳು ಕುಟುಕು ಕಾರ್ಯಾಚರಣೆ ನಡೆಸುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿವಳಿಕೆ ನೀಡಿದ್ದಾರೆ. ನ್ನೆ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಲಾಗಿದೆ. ಕಾಂಗ್ರೆಸ್‌‍ ಸರ್ಕಾರದ ಹೆಸರು ಕೆಡಿಸಲು ಹಾಗೂ ಪ್ರಮುಖ ನಾಯಕರ ರಾಜಕೀಯ ಭವಿಷ್ಯವನ್ನೇ ಹಾಳುಮಾಡಲು ಕೆಲವು ಸಂಸ್ಥೆಗಳು ಪಣತೊಟ್ಟಿವೆ.

ಅದಕ್ಕಾಗಿ ನಾನಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ರಹಸ್ಯ ಕ್ಯಾಮೆರಾ, ಆಡಿಯೋ ರೆಕಾರ್ಡ್‌ಗಳನ್ನು ಗುಪ್ತವಾಗಿ ಬಳಸಲಾಗುತ್ತಿದೆ. ಇನ್ನೂ ಕೆಲ ಸಚಿವರುಗಳ ಜೊತೆ ದೂರವಾಣಿ ಸಂಭಾಷಣೆಯ ಮೂಲಕ ಟ್ರ್ಯಾಪ್‌ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ವಿವಿಧ ಕಾಮಗಾರಿಗಳ ಗುತ್ತಿಗೆ ವಿಚಾರವಾಗಿ ಚರ್ಚೆಗೆ ಬರುವವರು, ವರ್ಗಾವಣೆ ಹಾಗೂ ಇತರ ಕೆಲಸಗಳ ನೆಪದಲ್ಲಿ ನಡೆಯುವ ಸಂಭಾಷಣೆಯ ವೇಳೆ ಸಚಿವರು ಎಚ್ಚರಿಕೆಯಿಂದ ಇರಬೇಕು. ಉದ್ದೇಶ ಪೂರ್ವಕವಾಗಿಯೇ ಕೆಣಕಿ ಮಾತುಕತೆ ಹೆಸರಿನಲ್ಲಿ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ಎಲ್ಲಿಯಾದರೂ ಅಜಾಗರೂಕತೆಯಿಂದ ಮಾತನಾಡಿದರೆ ಅಥವಾ ಆಕ್ಷೇಪಾರ್ಹ ಮಾಹಿತಿಗಳನ್ನು ಹಂಚಿಕೊಂಡರೆ ಅದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌‍ ಪಕ್ಷದ ಮರ್ಯಾದೆಯನ್ನು ಮೂರಾಬಟ್ಟೆ ಮಾಡುವ ಸಂಚುಗಳು ನಡೆದಿವೆ. ಈ ವಿಚಾರವಾಗಿ ಪ್ರತಿ ಹಂತದಲ್ಲೂ ಜಾಗ್ರತೆವಹಿಸಬೇಕು ಎಂದು ಮುಖ್ಯಮಂತ್ರಿಯವರು ಸಲಹೆ ನೀಡಿದ್ಧಾರೆ.

ಇನ್ನೂ ಕೆಲವು ಸಚಿವರಿಗೆ, ಶಾಸಕರಿಗೆ ಹನಿ ಟ್ರ್ಯಾಪ್‌ನ ಜಾಲಗಳು ಬೆನ್ನು ಬಿದ್ದಿವೆ. ವಿವಾಹೇತರ ಸಂಬಂಧಗಳ ವಿಷಯದಲ್ಲಿ ಯಾರೂ ಕೂಡ ಜಾಲಕ್ಕೆ ಸಿಲುಕಬಾರದು. ಅಪರಿಚಿತ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಜೊತೆ ಮಾತನಾಡುವಾಗ ಸೌಜನ್ಯತೆ ಮತ್ತು ಸಭ್ಯತೆ ಕಾಯ್ದುಕೊಳ್ಳಬೇಕು. ಕೆಲವು ಸಭೆ, ಸಮಾರಂಭಗಳಲ್ಲಿ ಉದ್ದೇಶ ಪೂರ್ವಕವಾಗಿಯೇ ಪ್ರಚೋದಿಸಿ ಸಹನೆಗೆಡುವಂತೆ ಮಾಡಲು ಒಂದು ತಂಡ ಪ್ರಯತ್ನಿಸಿದೆ. ಅದನ್ನು ಚಿತ್ರೀಕರಣ ಮಾಡಲು ಮತ್ತೊಂದು ತಂಡ ಕಾದು ಕುಳಿತಿರುತ್ತದೆ. ಹೀಗಾಗಿ ಸಚಿವರು ಸಾರ್ವಜನಿಕ ಜಾಗಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಾಧ್ಯವಾದಷ್ಟು ಪೊಲೀಸ್‌‍ ಸಿಬ್ಬಂದಿಗಳು, ಅಧಿಕಾರಿಗಳ ಸಮುಖದಲ್ಲೇ ಚರ್ಚೆಯಾಗುವಂತೆ ಮುಂಜಾಗ್ರತೆವಹಿಸಿ ಎಂದು ಸೂಚನೆ ನೀಡಿದ್ದಾರೆ.ಪ್ರಮುಖವಾಗಿ ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ ವಿರುದ್ಧ ಹೆಚ್ಚು ಮಾತನಾಡುತ್ತಿರುವವರು ಕುಟುಕು ಕಾರ್ಯಾಚರಣೆ ತಂಡದ ಮೊದಲ ಗುರಿಯಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಈ ರೀತಿಯ ಪ್ರಯತ್ನಗಳು ನಡೆಯುತ್ತಿರುವುದಾಗಿ ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ಸಚಿವರಿಗೆ ಮುಖ್ಯಮಂತ್ರಿಯವರು ತಿಳಿಸಿದ್ದಾರೆ.

ಕೇಂದ್ರ ಸ್ಥಾನ ಬೆಂಗಳೂರಿನಲ್ಲಷ್ಟೇ ಅಲ್ಲ, ಬೇರೆ ಬೇರೆ ಜಿಲ್ಲೆಗಳ ಪ್ರವಾಸ, ರಾಜ್ಯದ ಹೊರಗಡೆ ಸಂಚರಿಸುವಾಗಲೂ ಕೂಡ ಸಚಿವರು ಎಚ್ಚರಿಕೆಯಿಂದಿರಬೇಕು. ತಮ ಆಸೆ, ಅಭಿಲಾಷೆಗಳನ್ನು ವ್ಯಕ್ತಪಡಿಸುವಾಗ ಹುಷಾರಾಗಿರಬೇಕು. ಅದು ಚಿತ್ರೀಕರಣವಾಗುತ್ತಿದೆಯೇ?, ಧ್ವನಿ ಮುದ್ರಣವಾಗುತ್ತಿದೆಯೇ? ಎಂಬುದನ್ನು ಗಮನಿಸಬೇಕು. ಆದಷ್ಟು ಸೈಬರ್‌ ಸೆಕ್ಯೂರಿಟಿ ಇರುವ ಫೋನ್‌ಗಳನ್ನೇ ಬಳಸಿ ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES
spot_img

Latest News