ನವದೆಹಲಿ,ಅ.7-ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆ ಕುರಿತು ಎದ್ದಿದ್ದ ಗೊಂದಲಗಳಿಗೆ ಮತ್ತು ಟೀಕೆಗಳಿಗೆ ತೆರೆ ಬಿದ್ದಿದ್ದು, ಆಯೋಗವು ನೀಡಿರುವ ಸ್ಪಷ್ಟನೆಯು ಸುಪ್ರೀಂ ಕೋರ್ಟ್ನ ತೀರ್ಪನ್ನು ನಿಖರವಾಗಿ ಪ್ರತಿಬಿಂಬಿಸುತ್ತದೆ ಎಂಬುದು ಸ್ಪಷ್ಟವಾಗಿದೆ.
ಫಾರ್ಮ್ 6 ಅನ್ನು ಅಕ್ರಮ ವಾಗಿ ಮಾರ್ಪಡಿಸಲಾಗಿದೆ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಚುನಾವಣಾ ಆಯೋಗವು ತಪ್ಪಾಗಿ ನಿರೂಪಿಸಿದೆ ಎಂದು ಕೆಲ ಟೀಕಾಕಾರರು ಮತ್ತು ಮಾಧ್ಯಮ ವರದಿಗಳು ಆರೋಪಿಸಿದ್ದವು. ಆದರೆ, ಈ ಆರೋಪಗಳು ಶಾಸನಬದ್ಧ ಫಾರ್ಮ್ 6ರ ತಿದ್ದುಪಡಿ ಮತ್ತು ಹೆಚ್ಚುವರಿ ದಾಖಲೆಗಳ ನಿಯಮಾವಳಿ ಎಂಬ ಎರಡು ವಿಭಿನ್ನ ಪರಿಕಲ್ಪನೆಗಳನ್ನು ಒಂದೇ ಎಂದು ತಪ್ಪಾಗಿ ಭಾವಿಸಿರುವುದರಿಂದ ಉದ್ಭವಿಸಿವೆ.
ಮತದಾರರ ನೋಂದಣಿ ನಿಯಮಗಳು, 1960ರಡಿ ಫಾರ್ಮ್ 6 ಶಾಸನಬದ್ಧ ಮತ್ತು ಅಧಿಕೃತ ನಮೂನೆಯಾಗಿ ಮುಂದುವರಿಯುತ್ತದೆ. ಚುನಾವಣಾ ಆಯೋಗವು ಫಾರ್ಮ್ 6ರ ರಚನೆ ಅಥವಾ ಅದರ ವಿಷಯಗಳನ್ನು ತಿದ್ದುಪಡಿ ಮಾಡಿಲ್ಲ. ಬದಲಾಗಿ, ಎಸ್ಐಆರ್ ಸಂದರ್ಭದಲ್ಲಿ ಪಾರದರ್ಶಕತೆಗಾಗಿ ಹೊಸ ಮತದಾರರು ಫಾರ್ಮ್ 6 ರ ಜೊತೆಗೆ ಅನುಬಂಧ ಡಿ ಯಲ್ಲಿರುವ ಹೆಚ್ಚುವರಿ ಘೋಷಣಾಪತ್ರವನ್ನು ಲಗತ್ತಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದು ನಮೂನೆಯ ತಿದ್ದುಪಡಿಯಲ್ಲ, ಪೂರಕ ಸಾಕ್ಷ್ಯದ ಅವಶ್ಯಕತೆಯಷ್ಟೇ.
ಹೆಚ್ಚುವರಿ ದಾಖಲೆ ಕೋರುವ ಇಸಿಐ ಅಧಿಕಾರಕ್ಕೆ ಮಾನ್ಯತೆ:
ಸಾಮಾನ್ಯ ಪರಿಷ್ಕರಣಾ ಪ್ರಕ್ರಿಯೆಗಿಂತ ಎಸ್ಐಆರ್ ಭಿನ್ನವಾಗಿದ್ದು, ಮತದಾರರ ಪಟ್ಟಿಯ ಶುದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಹೆಚ್ಚುವರಿ ದಾಖಲೆಗಳನ್ನು ಕೋರುವ ಆಡಳಿತಾತಕ ವಿವೇಚನೆ ಮತ್ತು ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂಬುದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ (ಪ್ಯಾರಾಗ್ರಾಫ್ 152 ಮತ್ತು 161) ಎತ್ತಿಹಿಡಿದಿದೆ.
ಆಯೋಗವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಫಾರ್ಮ್ 6 ರ ತಿದ್ದುಪಡಿಯನ್ನು ಕೋರ್ಟ್ ಎತ್ತಿಹಿಡಿದಿದೆ ಎಂದು ಎಲ್ಲೂ ಹೇಳಿರಲಿಲ್ಲ. ಬದಲಾಗಿ, ಫಾರ್ಮ್ 6ರೊಂದಿಗೆ ಲಗತ್ತಿಸಲಾದ ಘೋಷಣಾಪತ್ರವನ್ನು ಎತ್ತಿಹಿಡಿಯಲಾಗಿದೆ ಎಂದು ತಿಳಿಸಿತ್ತು. ಸುಪ್ರೀಂಕೋರ್ಟ್ ಸಹ ಇದೇ ನಿಲುವನ್ನು ಅಂಗೀಕರಿಸಿದ್ದು, ನ್ಯಾಯಾಲಯದ ಅವಲೋಕನಕ್ಕೂ ಮತ್ತು ಆಯೋಗದ ಪತ್ರಿಕಾ ಪ್ರಕಟಣೆಗೂ ಯಾವುದೇ ವೈರುಧ್ಯವಿಲ್ಲ ಎಂಬುದು ಸಾಬೀತಾಗಿದೆ.
ಶಾಸನಬದ್ಧ ನಮೂನೆಯ ಮಾರ್ಪಾಡು ಮತ್ತು ಪೂರಕ ದಾಖಲೆಗಳ ಸರಬರಾಜಿನ ನಡುವಿನ ಕಾನೂನಾತಕ ವ್ಯತ್ಯಾಸವನ್ನು ಪರಿಗಣಿಸಿದಾಗ, ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಬಿಂಬಿಸಿದೆ ಎಂಬ ಆರೋಪಗಳು ಸಂಪೂರ್ಣ ನಿರಾಧಾರವಾಗಿವೆ. ಆಯೋಗದ ಪತ್ರಿಕಾ ಪ್ರಕಟಣೆಯು ನ್ಯಾಯಾಲಯ ನೀಡಿದ ಆದೇಶ ಮತ್ತು ನಿಲುವಿಗೆ ಸಂಪೂರ್ಣ ಬದ್ಧವಾಗಿದೆ.
ಆಯೋಗದ ಪ್ರಕಾರ, ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ನಿಗದಿಪಡಿಸಿರುವ ಫಾರ್ಮ್6 ತನ್ನ ಶಾಸನಬದ್ಧ ಸ್ವರೂಪದಲ್ಲಿ ಮುಂದುವರಿದಿದೆ. ಅದರ ರಚನೆ, ಅಂಶಗಳು ಅಥವಾ ಕಾನೂನುಬದ್ಧ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಎಸ್ಐಆರ್ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವವರು ಫಾರ್ಮ್6ರ ಜೊತೆಗೆ ನಿರ್ದಿಷ್ಟ ಘೋಷಣಾಪತ್ರವನ್ನೂ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇದನ್ನು ಫಾರ್ಮ್ನ ತಿದ್ದುಪಡಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಆಯೋಗದ ವಾದವಾಗಿದೆ.
ಬಿಹಾರ ಎಸ್ಐಆರ್ ತೀರ್ಪಿನ ಉಲ್ಲೇಖ
ಈ ವಿವಾದದ ಕೇಂದ್ರಬಿಂದುವಾಗಿರುವುದು ಬಿಹಾರದಲ್ಲಿ ನಡೆದ ಎಸ್ಐಆರ್ಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ವಿಚಾರಣೆ. ಸಾಮಾನ್ಯ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಫಾರ್ಮ್6 ಪ್ರಮಾಣಿತ ದಾಖಲಾತಿ ವ್ಯವಸ್ಥೆಯನ್ನು ಒದಗಿಸಿದರೂ, ವಿಶೇಷ ತೀವ್ರ ಪರಿಷ್ಕರಣೆಯ ಸಂದರ್ಭದಲ್ಲಿ ಹೆಚ್ಚುವರಿ ದಾಖಲೆಗಳನ್ನು ಕೇಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂಬ ಅಂಶವನ್ನು ನ್ಯಾಯಾಲಯ ಗುರುತಿಸಿದೆ ಎಂದು ಇಸಿಐ ಹೇಳಿದೆ.
ಆರೋಪ ತಳ್ಳಿಹಾಕಿದ ಇಸಿಐ
ಫಾರ್ಮ್ 6 ಅನ್ನು ತಿದ್ದುಪಡಿ ಮಾಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂದು ಸೆಪ್ಟೆಂಬರ್ 26ರ ಪತ್ರಿಕಾ ಪ್ರಕಟಣೆಯಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಫಾರ್ಮ್ 6ರೊಂದಿಗೆ ಸಲ್ಲಿಸಬೇಕಾದ ಘೋಷಣಾಪತ್ರದ ಅವಶ್ಯಕತೆಯನ್ನು ನ್ಯಾಯಾಲಯ ಅಂಗೀಕರಿಸಿದೆ ಎಂಬುದನ್ನಷ್ಟೇ ಪ್ರಕಟಣೆ ತಿಳಿಸಿತ್ತು ಎಂದು ಹೇಳಿದೆ.
ಒಟ್ಟಿನಲ್ಲಿ, ಎಸ್ಐಆರ್ನಡಿ ಫಾರ್ಮ್ 6ರ ಕಾನೂನುಬದ್ಧ ನಮೂನೆಯಲ್ಲಿ ಬದಲಾವಣೆ ಮಾಡಲಾಗಿದೆಯೇ ಅಥವಾ ಅದರೊಂದಿಗೆ ಹೆಚ್ಚುವರಿ ಘೋಷಣಾಪತ್ರವನ್ನು ಮಾತ್ರ ಕೇಳಲಾಗಿದೆಯೇ ಎಂಬ ವ್ಯತ್ಯಾಸವೇ ಇತ್ತೀಚಿನ ವಿವಾದದ ಕೇಂದ್ರವಾಗಿದೆ. ಚುನಾವಣಾ ಆಯೋಗ ಇದೀಗ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವ ದಾಖಲೆಗಳ ಅವಶ್ಯಕತೆ ಕುರಿತ ನಿಲುವನ್ನು ಆಧಾರವಾಗಿಸಿಕೊಂಡು ತನ್ನ ಸೆಪ್ಟೆಂಬರ್ 26ರ ಪ್ರಕಟಣೆಯನ್ನು ಸಮರ್ಥಿಸಿಕೊಂಡಿದ್ದು, ತೀರ್ಪನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.
