Homeರಾಷ್ಟ್ರೀಯಲಕ್ನೋದಲ್ಲಿ ಇಳಿದ ಇಂಡಿಗೋ ವಿಮಾನದ ಮುಂಭಾಗಕ್ಕೆ ಹಾನಿ, ಪ್ರಯಾಣಿಕರು ಸುರಕ್ಷಿತ

ಲಕ್ನೋದಲ್ಲಿ ಇಳಿದ ಇಂಡಿಗೋ ವಿಮಾನದ ಮುಂಭಾಗಕ್ಕೆ ಹಾನಿ, ಪ್ರಯಾಣಿಕರು ಸುರಕ್ಷಿತ

ಲಕ್ನೋ, ಅ. 8 (ಪಿಟಿಐ)- ಪಾಟ್ನಾದಿಂದ ಲಕ್ನೋಗೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನವು ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಅದರ ಮುಂಭಾಗದ ಭಾಗಕ್ಕೆ (ನೋಸ್‌ ಸೆಕ್ಷನ್‌) ಹಾನಿಯಾಗಿರುವುದು ಕಂಡುಬಂದಿದೆ. ವಿಮಾನದಲ್ಲಿದ್ದ ಎಲ್ಲಾ 104 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನವು ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಸಾಮಾನ್ಯ ರೀತಿಯಲ್ಲಿ ಇಳಿದಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಇಳಿದ ನಂತರ ವಿಮಾನ ನಿಲ್ದಾಣದ ತಂಡವು ಹಾನಿಯನ್ನು ಗಮನಿಸಿ ಇಂಡಿಗೋ ತಂಡಕ್ಕೆ ಮಾಹಿತಿ ನೀಡಿದೆ. ಬಳಿಕ ವಿಮಾನವನ್ನು ‘ಏರ್‌ಕ್ರಾಫ್ಟ್‌ ಆನ್‌ ಗ್ರೌಂಡ್‌’ ಎಂದು ಘೋಷಿಸಲಾಯಿತು ಎಂದು ಅಧಿಕಾರಿಯೊಬ್ಬರು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ಪಿಟಿಐಗೆ ತಿಳಿಸಿದ್ದಾರೆ.

ವಿಮಾನವು ತಾಂತ್ರಿಕ ಪರಿಶೀಲನೆ ಹಾಗೂ ಮುಂದಿನ ಅಗತ್ಯ ಕ್ರಮಗಳಿಗೆ ಒಳಪಡುತ್ತಿದೆ. ಪ್ರಾಥಮಿಕ ಮೌಲ್ಯಮಾಪನದ ಭಾಗವಾಗಿ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ವಿಮಾನವು ಸಿಡಿಲಿಗೆ ಸಿಲುಕಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ತನ್ನ ತನಿಖೆ ಪೂರ್ಣಗೊಳಿಸಿದ ಬಳಿಕ ಹೆಚ್ಚಿನ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲಿದೆ ಎಂದು ಮೂಲವೊಂದು ತಿಳಿಸಿದೆ. ಘಟನೆಯಲ್ಲಿ ತುರ್ತು ಭೂಸ್ಪರ್ಶದ ಅಗತ್ಯವಿರಲಿಲ್ಲ ಮತ್ತು ವಿಮಾನವು ಲಕ್ನೋ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ರೀತಿಯಲ್ಲಿ ಇಳಿದಿತ್ತು ಎಂದು ಮೂಲವು ಸ್ಪಷ್ಟಪಡಿಸಿದೆ.

RELATED ARTICLES
spot_img

Latest News