ಬೆಂಗಳೂರು,ಮಾ.29- ರಾಜ್ಯದಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದೆ. ರಾಜ್ಯದಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದ್ದು, ಜನರು ತತ್ತರಿಸುವಂತೆ ಮಾಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಏ.4 ರವರೆಗೂ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದ್ದು, ಮುಂಗಾರು ಪೂರ್ವ ಮಳೆಯಾಗುವ ಮುನ್ಸೂಚನೆಗಳಿಲ್ಲ.
ಕಳೆದ ಒಂದು ವಾರದ ಹಿಂದೆ ಕರಾವಳಿ, ಮಲೆನಾಡು ಸೇರಿದಂತೆ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗಿತ್ತು. ಆದರೂ ತಾಪಮಾನದಲ್ಲಿ ಯಾವುದೇ ಇಳಿಕೆ ಕಂಡುಬರಲಿಲ್ಲ. ಮುಂದಿನ ಒಂದು ವಾರದಲ್ಲಿ ಗರಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಶಿಯಸ್‍ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲೂ ಗರಿಷ್ಠ ತಾಪಮಾನ ಗಣನೀಯವಾಗಿ ಹೆಚ್ಚಳವಾಗಿದ್ದು, ಈಗಾಗಲೇ 36 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದೆ. ಬೆಂಗಳೂರಿನಲ್ಲಿ 36, ಬಾಗಲಕೋಟೆಯಲ್ಲಿ 40.6, ಕಲಬುರಗಿಯಲ್ಲಿ 40.9, ಹಾವೇರಿ 38.2, ವಿಜಯಪುರ 39, ಕೊಪ್ಪಳ 39.6, ರಾಯಚೂರು 38.8, ಮಂಡ್ಯ 37.4, ಮೈಸೂರು 36.1 ಡಿಗ್ರಿ ಸೆಲ್ಶಿಯಸ್‍ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಹೀಗೆ ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಹೆಚ್ಚಳ ಕಂಡುಬರುತ್ತಿದೆ.
ಆದರೆ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ತಾಪಮಾನ ರಾಜ್ಯದಲ್ಲಿ ದಾಖಲಾಗಿರುವ ನಿದರ್ಶನವಿದೆ. ಅಂದರೆ 1996 ರಲ್ಲಿ ಇದೇ ರೀತಿಯ ತಾಪಮಾನ ರಾಜ್ಯದಲ್ಲಿ ಕಂಡುಬಂದಿತ್ತು. ಆಗ ಬೆಂಗಳೂರಿನಲ್ಲಿ 37.3 ಡಿಗ್ರಿ ಸೆಲ್ಶಿಯಸ್, ಕಲಬುರಗಿಯಲ್ಲಿ 43, ಬಾಗಲಕೋಟೆಯಲ್ಲಿ 41.6, ವಿಜಯಪುರ 41.9, ರಾಯಚೂರು 44.6, ಬಳ್ಳಾರಿ 43, ಕೊಪ್ಪಳ 40.2 ಡಿಗ್ರಿ ಸೆಲ್ಶಿಯಸ್‍ನಷ್ಟು ಮಾರ್ಚ್ ಅಂತ್ಯದ ದಿನಗಳಲ್ಲಿ ಕಂಡುಬಂದಿತ್ತು.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ತೀವ್ರ ಬರಪರಿಸ್ಥಿತಿ ಉಂಟಾಗಿರುವುದರಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ, ಸಣ್ಣಪುಟ್ಟ ಕೆರೆಕಟ್ಟೆಗಳು ಬತ್ತಿ ಹೋಗಿವೆ, ಅಂತರ್ಜಲ ತೀವ್ರವಾಗಿ ಕುಸಿದಿವೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ, ಉಷ್ಣಾಂಶ ಅಧಿಕವಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.