Homeರಾಜಕೀಯ'ಸ್ಟಿಂಗ್‌ ಆಪರೇಷನ್‌' ಬಗ್ಗೆ ಮಾಹಿತಿ ಇದ್ದರೂ ಮೌನವಾಗಿರೋದೇಕೆ..? : ಸಿಎಂಗೆ ಹೆಚ್ಡಿಕೆ ಪ್ರಶ್ನೆ

‘ಸ್ಟಿಂಗ್‌ ಆಪರೇಷನ್‌’ ಬಗ್ಗೆ ಮಾಹಿತಿ ಇದ್ದರೂ ಮೌನವಾಗಿರೋದೇಕೆ..? : ಸಿಎಂಗೆ ಹೆಚ್ಡಿಕೆ ಪ್ರಶ್ನೆ

ಬೆಂಗಳೂರು,ಅ.11-ಸ್ಟಿಂಗ್‌ ಆಪರೇಷನ್‌ ಬಗ್ಗೆ ಮಾಹಿತಿ ಗೊತ್ತಿದ್ದೂ ಏಕೆ ಮೌನಕ್ಕೆ ಶರಣಾಗಿದ್ದೀರಿ? ಈ ಬಗ್ಗೆ ತನಿಖೆಯನ್ನು ಏಕೆ ನಡೆಸುತ್ತಿಲ್ಲ? ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಜೆಡಿಎಸ್‌‍ ಕೇಂದ್ರ ಕಚೇರಿ ಜೆಪಿ ಭವನದಲ್ಲಿಂದು ಲೋಕ ನಾಯಕ ಭಾರತರತ್ನ ಜಯಪ್ರಕಾಶ್‌ ನಾರಾಯಣ್‌ ಅವರ 124 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂಪುಟದ ಐವರು ಸಚಿವರ ಮೇಲೆ ಸ್ಟಿಂಗ್‌ ಆಪರೇಷನ್‌ ಆಗಿದೆ ಎಂಬ ಮಾಹಿತಿಯನ್ನು ಹೊರಬಿಡಲಾಗಿದೆ. ತಪ್ಪು ಮಾಡಿದ್ದರೆ ಅವರ ಮೇಲೆ ಏಕೆ ಕ್ರಮಗಳಾಗುತ್ತಿಲ್ಲ? ಸ್ಟಿಂಗ್‌ ಆಪರೇಷನ್‌ ಹಿಂದಿರುವ ವ್ಯಕ್ತಿ ಯಾರು? ಮನೆಗೆ ಕರೆಸಿಕೊಂಡು ಸ್ಟಿಂಗ್‌ ಆಪರೇಷನ್‌ಗೆ ಯಾರು ಸೂಚನೆ ಕೊಡುತ್ತಾರೆ? ಎಂಬೆಲ್ಲಾ ಮಾಹಿತಿಯನ್ನೂ ಜನರ ಮುಂದಿಡಬೇಕಲ್ಲವೇ? ಎಂದು ಪ್ರಶ್ನಿಸಿದರು.

ಸ್ವತಃ ಮುಖ್ಯಮಂತ್ರಿಯವರೇ ನನ್ನ ಮೇಲೆ ಸ್ಟಿಂಗ್‌ ಆಪರೇಷನ್‌ ಮಾಡಲು ಬಂದಿದ್ದರು ಎಂದು ಹೇಳಿದ್ದಾರೆ. ಸಚಿವ ಸಂಪುಟ ಸಭೆಗೂ 2-3 ದಿನ ಮುಂಚೆ ವಸಂತನಗರದ ಖಾಸಗಿ ಹೋಟೆಲ್‌ನಲ್ಲಿ ಯಾವ ವ್ಯಕ್ತಿಯ ಜೊತೆ ಚರ್ಚೆ ಮಾಡಿದ್ದೀರಿ? ಆ ವ್ಯಕ್ತಿ ಯಾರು? ಆ ವ್ಯಕ್ತಿ ನಿಮಗೆ ಯಾವ ಫೈಲ್‌ಗಳನ್ನು ಕೊಟ್ಟಿದ್ದಾರೆ? ಎಂಬೆಲ್ಲಾ ಸಮಗ್ರ ಮಾಹಿತಿಯನ್ನು ಬಹಿರಂಗಪಡಿಸಿ ಎಂದು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಆಗ್ರಹಿಸಿದರು.

ಕಾಂಗ್ರೆಸ್‌‍ ಹಿರಿಯ ನಾಯಕರೊಬ್ಬರ ಬಗ್ಗೆ ಸ್ಟಿಂಗ್‌ ಆಪರೇಷ ಆಗಿದೆ ಎಂಬ ಮಾಹಿತಿ ಹೊರಬಂದಿದೆ. ಹಾಗಿದ್ದರೆ ಸ್ಟಿಂಗ್‌ ಆಪರೇಷನ್‌ ಪಿತಾಮಹ ಮಹಾನಾಯಕ ಯಾರು? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌‍ ಪಕ್ಷಕ್ಕೆ ಜೀವ ಕೊಟ್ಟ ವ್ಯಕ್ತಿಯನ್ನು ಹೊರಗೆ ತಂದಿದ್ದಾರೆ. ಸತ್ಯಾಂಶವನ್ನು ಏಕೆ ಮುಚ್ಚಿಡುತ್ತೀರಿ? ಇದರ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ ಪಕ್ಷದಲ್ಲೇ ಇದ್ದಂತಹ ನಾಯಕರು. ಅವರನ್ನು ದುಡಿಸಿಕೊಂಡು ಗೌರವವಾಗಿ ನಡೆಸಿಕೊಳ್ಳಬಾರದು. ಅವರು ಮುಖ್ಯಮಂತ್ರಿಯಾಗಿದ್ದಾಗ ಆ ಸ್ಥಾನದಿಂದ ಕೆಳಗಿಳಿಸಲು ದೆಹಲಿಯಲ್ಲಿ ಯಾವಯಾವ ರೀತಿ ನಡೆದುಕೊಂಡಿದ್ದೀರಿ ಎಂಬುದು ಕಾಂಗ್ರೆಸ್‌‍ನಲ್ಲಿ ಚರ್ಚೆಯಾಗುತ್ತಿದೆ. ಅಧಿಕಾರಕ್ಕಾಗಿ, ಹಣಕ್ಕಾಗಿ ರಾಜ್ಯದ ಗೌರವವನ್ನು ಹಾಳು ಮಾಡಬೇಡಿ ಎಂದರು. ಸ್ಟಿಂಗ್‌ ಆಪರೇಷನ್‌ ವಿಚಾರ ಗಂಭೀರವಾಗಿದ್ದು, ಗೃಹಸಚಿವರಾದಿಯಾಗಿ ಎಲ್ಲರಿಗೂ ಗೊತ್ತಿದ್ದರೂ ಮುಚ್ಚಿಡುತ್ತಿದ್ದಾರೆ. ಇದೊಂದು ಕೆಟ್ಟ ಪರಂಪರೆಯನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸ್ಟಿಂಗ್‌ ಆಪರೇಷನ್‌ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುವುದಾಗಿ ಹೇಳುತ್ತಾರೆ. ದೂರು ಇಲ್ಲದೆ ಎಷ್ಟು ಪ್ರಕರಣಗಳಲ್ಲಿ ತನಿಖೆ ನಡೆಸಿಲ್ಲ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹಾಸನ ಜಿಲ್ಲಾಧಿಕಾರಿ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಪಿಎಸ್‌‍ಸಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ನೇಮಕಾತಿ ಅವ್ಯವಹಾರ ಆರೋಪದ ವಿಚಾರದಲ್ಲಿ ಅಮಾನತು ಮಾಡುವುದಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.

ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ರಾಜ್ಯ ಸರ್ಕಾರದ ಅಧಿಕಾರಿಗಳು. ತಪ್ಪುಗಳಾಗಿರುವ ಮಾಹಿತಿಗಳಿದ್ದರೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಪಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಹೋರಾಟ ನಡೆಸಬೇಕಾದ ಅಗತ್ಯವಿದೆ. ವಿಜಯನಗರದ ಭಂಟರ ಸಂಘದಲ್ಲಿ ಅ.16 ರಂದು ಕೆಪಿಎಸ್‌‍ಸಿ ನೇಮಕಾತಿ ಅಕ್ರಮದಿಂದ ಉದ್ಯೋಗವಂಚಿತರಾಗಿರುವ ಯುವಜನರೊಂದಿಗೆ ಸಂವಾದ ನಡೆಸಲಾಗುವುದು ಎಂದರು.

ಜೆಪಿ ಅವರು ಜೀವನದುದ್ದಕ್ಕೂ ನಿಸ್ವಾರ್ಥ ಸೇವೆ ಮಾಡಿ ಜನಪರ ಹೋರಾಟ ನಡೆಸಿದವರು ಎಂದು ಅವರು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಎಚ್‌.ಎಂ.ರಮೇಶ್‌ಗೌಡ, ಜೆಡಿಎಸ್‌‍ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾರಾವ್‌, ಪಕ್ಷದ ಮುಖಂಡರಾದ ಎಚ್‌.ಪ್ರಕಾಶ್‌, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
spot_img

Latest News