ಬೆಂಗಳೂರು,ನ.26- ನಡುರಸ್ತೆಯಲ್ಲೇ ಸಾರ್ವಜನಿಕರನ್ನು ಅಡ್ಡಹಾಕಿ, ಬೆದರಿಸಿ, ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಓಲಾ, ಊಬರ್ ಕ್ಯಾಬ್ ಡ್ರೈವರ್ ಸೇರಿದಂತೆ ನಾಲ್ವರನ್ನು ವೈಟ್‌ಫೀಲ್‌್ಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು ಮತ್ತು 7,600 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೈಟ್‌ಫೀಲ್‌್ಡನ ನಿವಾಸಿಗಳಾದ ಮನೋಜ್ (29), ಸಯ್ಯದ್ ಶಫಿ(26), ಅಖಿಲೇಶ್ (20) ಹಾಗೂ ಪ್ರೀತಂ ಪ್ರಕಾಶ್(20) ಬಂಧಿತ ಆರೋಪಿಗಳು.
ಮನೋಜ್ ಮತ್ತು ಸಯ್ಯದ್ ವೃತ್ತಿಯಲ್ಲಿ ಓಲಾ, ಊಬರ್ ಚಾಲಕರು ಅಖಿಲೇಶ್ ಟ್ಯಾಟೂ ಆರ್ಟಿಸ್ಟ್ ಎಂದು ಪೊಲೀಸರು ತಿಳಿಸಿದ್ದಾರೆ. ಮಹಮದ್ ನಿಸಾರ್ ಎಂಬುವವರು ದ್ವಿಚಕ್ರ ವಾಹನದಲ್ಲಿ ಮಧ್ಯಾಹ್ನ 3 ಗಂಟೆ
ಸಮಯದಲ್ಲಿ ನಲ್ಲೂರಳ್ಳಿ ಬಳಿ ಹೋಗುತ್ತಿದ್ದರು. ಆಗ ಕಾರಿನಲ್ಲಿ ಬಂದ ಮೂವರು ಅಡ್ಡಗಟ್ಟಿ ಸ್ಕೂಟಿ ಕೀಯನ್ನು ಕಿತ್ತುಕೊಂಡು, ಕಾರಿನೊಳಗೆ ಎಳೆದುಕೊಂಡು ಹಣ ಕೊಡುವಂತೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದರು.
ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಫೋನ್‌ನಿಂದ 7,600 ರೂ.ಗಳನ್ನು ವರ್ಗಾಯಿಸಿಕೊಂಡು ಕಾರಿನಿಂದ ಅವರನ್ನು ಹೊರಗೆ ತಳ್ಳಿ ಪರಾರಿಯಾಗಿದ್ದರು. ನಂತರ ಅವರು ಈ ಸಂಬಂಧ ವೈಟ್‌ಫೀಲ್‌್ಡ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಗಳ ಸೆರೆ
ಬೆಂಗಳೂರು,ನ.26- ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಮೂವರು ರೌಡಿಗಳನ್ನು ರೌಡಿ ನಿಗ್ರಹದಳ ಪೊಲೀಸರು ಬಂಧಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯ ರೌಡಿ ಪನ್ನೀರು ಸೇಲ್ವಂ ಅಲಿಯಾಸ್ ಪ್ರಭು (45) ಈತನ ವಿರುದ್ಧ ಪೀಣ್ಯ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್, ಚಾಮರಾಜಪೇಟೆ, ಜೆ.ಜೆ ನಗರ,ವಿಜಯನಗರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಕೊಲೆ, ಕೊಲೆಯತ್ನ, ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು ಹತ್ತು ಪ್ರಕರಣಗಳು ದಾಖಲಾಗಿವೆ.
ಈತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಪ್ರೊಕ್ಲಮೇಷನ್‌ನಲ್ಲಿ ಸುಮಾರು 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮಕ್ಕಾಗಿ ಪೀಣ್ಯ ಠಾಣೆಗೆ ಹಾಜರುಪಡಿಸಲಾಗಿದೆ. ಗಿರಿನಗರ ಪೊಲೀಸ್ ಠಾಣೆಯ ರೌಡಿ ನರಸಿಂಹಮೂರ್ತಿ ಅಲಿಯಾಸ್ ಕೊಸೆ (25) ಈತನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿರುತ್ತವೆ.
ಈತ ಸುಮಾರು ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ಈತನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಈಗ ಪೊಲೀಸರು ಬಂಧಿಸಿ ಸೂಕ್ತ ಕ್ರಮಕ್ಕಾಗಿ ಗಿರಿನಗರ ಠಾಣೆಗೆ ಒಪ್ಪಿಸಿದ್ದಾರೆ.
ಸಿದ್ದಾಪುರ ಠಾಣೆಯ ರೌಡಿ ಸಾಧಿಕ್ ಪಾಷಾ ಅಲಿಯಾಸ್ ಬಿರಿಯಾನಿ (30) ಈತನ ವಿರುದ್ಧ ತಿಲಕ್‌ನಗರ ಸಿದ್ದಾಪುರ ಪೊಲೀಸ್ ರಾಣೆಗಳಲ್ಲಿ ಕೊಲೆಯತ್ನ, ಹಲ್ಲೆ, ಕಳ್ಳತನ ಇತರೆ ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಈತನನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಸಿದ್ದಾಪುರ ಪೊಲೀಸ್ ಠಾಣೆಗೆ ಹಾಜರು ಪಡಿಸಲಾಗಿದೆ.
