ಬೆಂಗಳೂರು,ನ.26-ಗಾರೆ ಕೆಲಸಗಾರನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ರಾತ್ರಿ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ರಾಯಚೂರು ಜಿಲ್ಲೆಯ ನಿವಾಸಿ ಗಜಲಿಂಗ (35) ಕೊಲೆಯಾಗಿರುವ ಗಾರೆ ಕೆಲಸಗಾರ. ಇವರು ಸುಮಾರು ಹತ್ತು ವರ್ಷಗಳಿಂದ ನಗರದ ವಿನಾಯಕ ಲೇಔಟ್‌ನಲ್ಲಿ ಲೇಬರ್‌ಶೆಡ್‌ನಲ್ಲಿ ವಾಸವಾಗಿದ್ದರು. ಇವರಿಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ಪತ್ನಿ ಮತ್ತು ಮಕ್ಕಳು ಊರಿಗೆ ಹೋಗಿದ್ದು, ಇವರೊಬ್ಬರೇ ಇದ್ದರು. ರಾತ್ರಿ ತಮ ಶೆಡ್‌ನ ಬಳಿ ಯಾರೋ ದುಷ್ಕರ್ಮಿಗಳು ಜಗಳ ತೆಗೆದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಸುದ್ದಿ ತಿಳಿದು ಚಂದ್ರಾಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅನೈತಿಕ ಸಂಬಂಧ ಅಥವಾ ಹಳೇ ದ್ವೇಷದಿಂದ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
