ನವದೆಹಲಿ, ಅ.11- ದೆಹಲಿಯ ಡಿಡಿಯು ಮಾರ್ಗದಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಮಹಿಳೆಯರನ್ನು ತಳ್ಳಾಡಿಸಿ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಪ್ರತಿಭಟನೆಯ ಮರುದಿನವೇ ವೈರಲ್ ಆಗಿದ್ದ ವಿಡಿಯೋ ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಡಿಡಿಯು ಮಾರ್ಗದಲ್ಲಿ ಈ ಘಟನೆ ನಡೆದಿರುವುದಾಗಿ ತನಿಖೆಯ ವೇಳೆ ಪತ್ತೆಯಾಗಿದೆ.
ಬಂಧಿತರನ್ನು 50 ವರ್ಷದ ರಮಣ್ ಸೈನಿ, 32 ವರ್ಷದ ವಿವೇಕಾನಂದ ಅಲಿಯಾಸ್ ವಿವೇಕ್, 27 ವರ್ಷದ ಕಪಿಲ್ ಕುಮಾರ್ ಹಾಗೂ 35 ವರ್ಷದ ರವೀಂದರ್ ಸಿಂಗ್ ಅಲಿಯಾಸ್ ಗೋವಿಂದ್ ಹಿಂದೂ ಎಂದು ಗುರುತಿಸಲಾಗಿದೆ.
ಬಂಧಿತ ನಾಲ್ವರೂ ಬಲಪಂಥೀಯ ಸಂಘಟನೆಯಾದ ಹಿಂದೂ ರಕ್ಷಾ ದಳದ ಸದಸ್ಯರೆಂದು ಹೇಳಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ 10ರಂದು ಪ್ರತಿಭಟನೆ ಆರಂಭವಾದ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಜಮಾಯಿಸಲು ಪ್ರಯತ್ನಿಸುತ್ತಿದ್ದರು.
ಈ ವೇಳೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಮಹಿಳೆಯರನ್ನು ತಳ್ಳಾಡಿಸಿ ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆರಂಭದಲ್ಲಿ ಘಟನೆ ನಡೆದ ನಿಖರ ಸ್ಥಳ ಪೊಲೀಸರಿಗೆ ತಿಳಿದಿರಲಿಲ್ಲ. ಬಳಿಕ ಸ್ಥಳದಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ದೆಹಲಿಯ ಡಿಡಿಯು ಮಾರ್ಗದಲ್ಲಿ ಘಟನೆ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈರಲ್ ಆಗಿರುವ ದೃಶ್ಯಗಳಲ್ಲಿ ಯುವ ವಿದ್ಯಾರ್ಥಿಗಳನ್ನು ತಳ್ಳಾಡಿಸಿ ಹಲ್ಲೆ ನಡೆಸುತ್ತಿರುವುದು ಹಾಗೂ ಮಹಿಳೆಯರ ಮೇಲೂ ದೈಹಿಕ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳದಲ್ಲಿರುವುದೂ ದೃಶ್ಯಗಳಲ್ಲಿ ಕಾಣಿಸುತ್ತದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿರಲಿಲ್ಲ. ಆದರೆ, ಆರೋಪಿಗಳು ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರಹೋಗಿ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣದ ಕುರಿತು ಕ್ರಮ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಭಾರತೀಯ ಯುವ ಕಾಂಗ್ರೆಸ್, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಹಾಗೂ ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳ ಸಾಮಾಜಿಕ ಜಾಲಖಾತೆಗಳ ಮೂಲಕವೂ ಹಂಚಿಕೆಯಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲೆ ನಡೆದಿದೆಯೆನ್ನಲಾದ ಹಲ್ಲೆ ಘಟನೆ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.
