ನವದೆಹಲಿ, ಅ.12- ಕಾವೇರಿ ನದಿ ಪಾತ್ರದಲ್ಲಿನ ಜಲಾಶಯಗಳಿಗೆ ಒಳ ಹರಿವು ಕಡಿಮೆಯಾಗಿರುವುದರಿಂದಾಗಿ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು ಆದೇಶ ನೀಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಮನವಿ ಮಾಡುವುದಾಗಿ ಜಲ ಸಂಪನೂಲ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ. ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿನ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರಿಂದಾಗಿ ನೀರಿನ ಹರಿವನ್ನು 3 ಸಾವಿರ ಕ್ಯೂಸೆಕ್‌ಗೆ ಸಿಡಬ್ಲ್ಯೂಆರ್‌ಸಿ ಕಡಿತ ಮಾಡಿದೆ ಎಂದು ಹೇಳಿದರು.
ನಮಗೆ ಸಮಸ್ಯೆಗಳಿದ್ದರೂ, ಸುಪ್ರೀಂಕೋರ್ಟ್ ಮತ್ತು ಸಿಡಬ್ಲ್ಯೂಆರ್‌ಸಿ ಆದೇಶ ಪಾಲನೆ ಮಾಡಿದ್ದೇವೆ. ಈಗ ನೀರಿನ ಒಳ ಹರಿವು ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಲು ಕಷ್ಟ ಸಾಧ್ಯವಾಗುತ್ತದೆ. ಹೀಗಾಗಿ ತಮ ಆದೇಶವನ್ನು ಪುನರ್ ಪರಿಶೀಲಿಸುವಂತೆ ಸಿಡಬ್ಲ್ಯೂಆರ್‌ಸಿಗೆ ಮೇಲನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರಿ ಬಿಡುವ ವಿಚಾರವಾಗಿ ಸಂಕಷ್ಟ ಸೂತ್ರ ಪಾಲನೆಯಾಗಬೇಕು. ನಮಗೆ ನೀರಿಲ್ಲದಿದ್ದಾಗ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ? ಈ ಕುರಿತಂತೆ ಒಟ್ಟಾರೆ ಪರಿಶೀಲನೆ ನಡೆಸಲು ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ಆರಂಭದಲ್ಲಿ 10 ಸಾವಿರ ಕ್ಯೂಸೆಕ್‌ವರೆಗೂ ನೀರು ಬಿಡುವಂತೆ ನ್ಯಾಯಾಧಿಕರಣ ಆದೇಶ ನೀಡಿತ್ತು. ರಾಜ್ಯ ಸರ್ಕಾರದ ವಾದಗಳು ತೀವ್ರವಾದ ಹಿನ್ನೆಲೆಯಲ್ಲಿ 3 ಸಾವಿರ ಕ್ಯೂಸೆಕ್‌ಗೆ ಬಂದು ನಿಂತಿದೆ. ನೈಸರ್ಗಿಕವಾಗಿ ಅಷ್ಟು ನೀರು ಹರಿದುಹೋಗುವುದು ಸಹಜ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ದೆಹಲಿಯಲ್ಲಿಂದು ನಡೆದ ಸುಪ್ರೀಂಕೋರ್ಟ್ ಚಲೋ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುತ್ತಿದ್ದು, ದೇಶದ ಮತದಾರರ ರಕ್ಷಣೆಗೆ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ಅರ್ಜಿ ನಮೂನೆ-7ರ ಹೆಸರಿನಲ್ಲಿ ಅರ್ಹ ಮತದಾರರನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಚುನಾವಣೆ ಗೆಲ್ಲುವ ವ್ಯವಸ್ಥೆಗಳನ್ನು ರೂಪಿಸಿಕೊಂಡಿದೆ. ಅರ್ಹ ಮತದಾರರ ಹಕ್ಕುಗಳಿಗಾಗಿ ಆಯೋಗ ನಿರಂತರ ಹೋರಾಟ ನಡೆಸುತ್ತಿದೆ ಎಂದು ಅವರು ಹೇಳಿದರು.
