ನವದೆಹಲಿ, ಅ. 12- ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದೇಶಗಳಿಗೆ ಒಂದು ದಿನ ಅದೇ ಅಪಾಯ ತಮ ಜನರಿಗೂ ತಟ್ಟಲಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುವ ದೇಶಗಳ ರಾಜಕೀಯ ನಾಯಕತ್ವವು ಅದರ ದೀರ್ಘಕಾಲೀನ ಪರಿಣಾಮಗಳನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಸೋಮವಾರ ನಡೆದ ಭಾರತದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳು, ಮೌಲ್ಯಗಳು ಮತ್ತು ಕಾರ್ಯತಂತ್ರದ ಉದ್ದೇಶಗಳು ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಭಯೋತ್ಪಾದನೆಯನ್ನು ಇತರರಿಗೆ ಹಾನಿ ಮಾಡುವ ಅಕ್ರಮ ಅಸ್ತ್ರವಾಗಿ ಬಳಸಬಹುದು. ಆದರೆ, ದೀರ್ಘಾವಧಿಯಲ್ಲಿ ಅದರಿಂದ ತಮ್ಮ ದೇಶದ ಜನರಿಗೂ ಹಾನಿಯಾಗಲಿದೆ ಎಂಬುದನ್ನು ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವ ದೇಶಗಳು ಅರ್ಥಮಾಡಿಕೊಳ್ಳಬೇಕು ಎಂದು ರಾಧಾಕೃಷ್ಣನ್ ಹೇಳಿದರು.
ಭಾರತದ ರಾಷ್ಟ್ರೀಯ ಭದ್ರತಾ ಆದ್ಯತೆಗಳನ್ನು ವಿವರಿಸಿದ ಉಪರಾಷ್ಟ್ರಪತಿ, ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವುದು, ರಾಷ್ಟ್ರೀಯ ಏಕತೆ ಮತ್ತು ಅಭಿವೃದ್ಧಿಯನ್ನು ರಕ್ಷಿಸುವುದು ಹಾಗೂ ದೇಶದ ಭೂಪ್ರದೇಶ, ವಾಯುಪ್ರದೇಶ ಮತ್ತು ಸಮುದ್ರ ಹಿತಾಸಕ್ತಿಗಳನ್ನು ಸಂರಕ್ಷಿಸುವುದು ಪ್ರಮುಖ ಉದ್ದೇಶಗಳಾಗಿವೆ ಎಂದು ತಿಳಿಸಿದರು. ಭಾರತದ ಆರ್ಥಿಕತೆಗೆ ನಿರ್ಣಾಯಕವಾಗಿರುವ ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಸುರಕ್ಷತೆಯೂ ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಇದರ ಜೊತೆಗೆ, ಸೈಬರ್ ವಲಯದ ಭದ್ರತೆಯನ್ನು ಬಲಪಡಿಸುವುದು ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಅಂತರರಾಷ್ಟ್ರೀಯ ಸ್ಥಿರತೆ ಉತ್ತೇಜಿಸಲು ಇತರ ರಾಷ್ಟ್ರಗಳೊಂದಿಗೆ ರಚನಾತ್ಮಕ ಸಹಕಾರ ಬೆಳೆಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಭಾರತವು ಸುರಕ್ಷಿತ ವಾತಾವರಣದಲ್ಲಿ ಅಭಿವೃದ್ಧಿ ಹೊಂದಲು, ಸಮೃದ್ಧಿ ಸಾಧಿಸಲು ಮತ್ತು ತನ್ನ ಗುರಿಗಳನ್ನು ತಲುಪಲು ಭದ್ರತೆ ನೆರವಾಗುತ್ತದೆ ಎಂದು ಅವರು ವಿವರಿಸಿದರು.
ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಬೇಕೆಂಬ ಭಾರತದ ಆಶಯವು ಇತರ ದೇಶಗಳ ಮೇಲೆ ತನ್ನ ನಿರ್ಧಾರಗಳನ್ನು ಹೇರುವುದಲ್ಲ. ಬದಲಾಗಿ, ಯಾವುದೇ ದೇಶವು ಭಾರತದ ಮೇಲೆ ಅನೈತಿಕ ಷರತ್ತುಗಳನ್ನು ಹೇರದಂತೆ ಸ್ವಾವಲಂಬಿ ಮತ್ತು ಶಕ್ತಿಶಾಲಿಯಾಗುವುದು ಇದರ ಉದ್ದೇಶ ಎಂದು ಉಪರಾಷ್ಟ್ರಪತಿ ಸ್ಪಷ್ಟಪಡಿಸಿದರು.
