Homeಕ್ರೀಡಾ ಸುದ್ದಿಫಿಬಾ WBL ಏಷ್ಯಾ 2026 ಚಾಂಪಿಯನ್‌ಷಿಪ್‌ಗೆ ಬೆಂಗಳೂರು ಸಜ್ಜು

ಫಿಬಾ WBL ಏಷ್ಯಾ 2026 ಚಾಂಪಿಯನ್‌ಷಿಪ್‌ಗೆ ಬೆಂಗಳೂರು ಸಜ್ಜು

ಬೆಂಗಳೂರು: ಕರ್ನಾಟಕ ಸರ್ಕಾರ, ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ವತಿಯಿಂದ ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ (ಫಿಬಾ) ಹಾಗೂ ಫಿಬಾ ಏಷ್ಯಾ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಏಷ್ಯಾದ ಮಹಿಳಾ ವೃತ್ತಿಪರ ಬಾಸ್ಕೆಟ್‌ಬಾಲ್‌ನ ಅಗ್ರ ಕ್ಲಬ್ ತಂಡಗಳು ಸ್ಪರ್ಧಿಸಲಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಗ್ರ 6 ಕ್ಲಬ್ ತಂಡಗಳು ಭಾಗಿ

ಚೀನಾದ ಸಿಚುವಾನ್ ಯುಯಾಂದ ಮೀಲೆ, ಜಪಾನ್‌ನ ಡೆನ್ನೊ ಐರಿಸ್, ಫಿಲಿಪ್ಪೀನ್ಸ್‌ನ ತಂಡಗಳು ಹಾಗೂ ಭಾರತದ ಚಾಂಪಿಯನ್ ಕ್ಲಬ್ ತಂಡವಾದ ಭಾರತೀಯ ರೈಲ್ವೇಸ್ ಸೇರಿದಂತೆ ಆರು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ಸತತ ಮೂರನೇ ಆವೃತ್ತಿಯಲ್ಲಿ ಆಡುತ್ತಿರುವ ಏಕೈಕ ಕ್ಲಬ್ ಎನಿಸಿಕೊಂಡಿದೆ.

ಬಾಸ್ಕೆಟ್‌ಬಾಲ್ ಹಬ್ ಆಗಿ ಬೆಂಗಳೂರು

ಸಿಲಿಕಾನ್ ಸಿಟಿ, ಉದ್ಯಾನನಗರಿ, ವಿಜ್ಞಾನನಗರಿ ಸೇರಿದಂತೆ ವಿವಿಧ ಹೆಸರುಗಳಿಂದ ಬೆಂಗಳೂರು ನಗರವನ್ನು ಕರೆಯಲಾಗುತ್ತದೆ. ಕ್ರೀಡೆಯ ವಿಷಯಕ್ಕೆ ಬಂದರೆ, ಬೆಂಗಳೂರು ಬಾಸ್ಕೆಟ್‌ಬಾಲ್ ಹಬ್ ಆಗಿ ಬೆಳೆದಿದೆ. ಜೂನಿಯರ್ ಮಟ್ಟದಿಂದ ಹಿಡಿದು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಫಿಬಾ ಏಷ್ಯಾ ಟೂರ್ನಿಗಳನ್ನು ಆಯೋಜಿಸುತ್ತಿರುವುದೇ ಇದಕ್ಕೆ ಸಾಕ್ಷಿ.

ಈಗಾಗಲೇ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಲವು ಬಾರಿ ಫಿಬಾ ಏಷ್ಯಾ ಮಟ್ಟದ ಟೂರ್ನಿಗಳನ್ನು ಆಯೋಜಿಸಲಾಗಿದೆ. ಈ ಮೂಲಕ ಒಂದೇ ತಾಣದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸಿರುವ ಹಿರಿಮೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣ ಪಾತ್ರವಾಗಿದೆ.

2004ರಿಂದ ವಿವಿಧ ಫಿಬಾ ಟೂರ್ನಿಗಳನ್ನು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ ಆಯೋಜಿಸಿಕೊಂಡು ಬರುತ್ತಿದೆ.ಟೂರ್ನಿಯ ಎಲ್ಲ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪ್ರತಿದಿನ ಎರಡು ಪಂದ್ಯಗಳು ನಡೆಯಲಿವೆ. ಸಂಜೆ 4 ಗಂಟೆ ಹಾಗೂ ರಾತ್ರಿ 7 ಗಂಟೆಗೆ ಪಂದ್ಯಗಳು ಆರಂಭವಾಗಲಿವೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಏಷ್ಯಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಮತ್ತು ಪೊಲೀಸ್ ಇಲಾಖೆ ನಿರ್ದೇಶಕ ಅನುಚೇತ್ ಉಪಸ್ಥಿತರಿದ್ದರು.

RELATED ARTICLES
spot_img

Latest News