ಬೆಂಗಳೂರು,ಏ.2- ಗೊಂಬೆ ನಾಡು ಎಂದೇ ಪ್ರಸಿದ್ದವಾಗಿರುವ ಚನ್ನಪಟ್ಟಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ರೋಡ್ ಶೋ ನಡೆಸುವ ಮೂಲಕ ಚುನಾವಣಾ ರಣ ಕಹಳೆ ಮೊಳಗಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರವಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮೊದಲ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಷಾ ಪಾಲ್ಗೊಳ್ಳುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಎನ್‍ಡಿಎ ಅಭ್ಯರ್ಥಿಗಳ ಪರವಾಗಿ ಷಾ ಪ್ರಚಾರ ಕೈಗೊಳ್ಳಲಿದ್ದಾರೆ.
ಇಂದು ಸಂಜೆ 5.30ಕ್ಕೆ ಮಂಗಳವಾರಪೇಟೆಯಿಂದ ಚನ್ನಪಟ್ಟಣದ ಡಿ.ಟಿ.ರಾಮು ವೃತ್ತದವರೆಗೂ ನಡೆಯುವ ರೋಡ್ ಶೋ ನಡೆಯಲಿದೆ. ಅಮಿತ್ ಷಾ ಅವರಲ್ಲದೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮೊದಲಾದ ಎನ್‍ಡಿಎ ನಾಯಕರು ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ರೋಡ್ ಶೋನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಚನ್ನಪಟ್ಟಣದಲ್ಲಿ ಚುನಾವಣಾ ಕಹಳೆ ಮೊಳಗಿಸುವ ಮೂಲಕ ಜೆಡಿಎಸ್-ಬಿಜೆಪಿ ನಾಯಕರ ಜಂಟಿ ಚುನಾವಣಾ ಪ್ರಚಾರಕ್ಕೂ ನಾಂದಿ ಹಾಡಲಿದ್ದಾರೆ. ಈಗಾಗಲೇ ಸ್ಥಳೀಯವಾಗಿ ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಮನ್ವಯ ಸಭೆಗಳನ್ನು ನಡೆಸಿ ಚುನಾವಣಾ ಪ್ರಚಾರದಲ್ಲಿ ಉಭಯ ಪಕ್ಷಗಳ ನಾಯಕರು ಪಾಲ್ಗೊಳ್ಳುತ್ತಿದ್ದಾರೆ.