ಬೆಂಗಳೂರು,ಏ.2- ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸದಿದ್ದರೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆಂಬ ಭಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಗೇಲಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾಗಳನ್ನು ಪಡೆಯದಿದ್ದರೆ ತಮ್ಮ ಸ್ಥಾನ ಬದಲಾವಣೆ ಆಗುವುದು ಖಚಿತ ಎಂಬ ಭಯ ಸಿದ್ದರಾಮಯ್ಯರನ್ನು ಕಾಡಿದೆ. ಅದಕ್ಕಾಗಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ 60 ಸಾವಿರಕ್ಕೂ ಹೆಚ್ಚು ಲೀಡ್ ಕೊಡಬೇಕೆಂದು ಕೋರಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು 60 ಸಾವಿರ ಲೀಡ್ ಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಸಿದ್ದರಾಮಯ್ಯ ಮನಸ್ಸಿನಲ್ಲಿ ಇರುವುದನ್ನೇ ಹೇಳಿದ್ದಾರೆ. ಒಂದು ವರ್ಷದಿಂದ ಸಿಎಂ ಬದಲಾವಣೆ, ನಾಲ್ವರು ಉಪಮುಖ್ಯಮಂತ್ರಿಗಳ ನೇಮಕದ ಬಗ್ಗೆ ಚರ್ಚೆಯಾಗುತ್ತಿದೆ.
ಪ್ರಸಕ್ತ ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುತ್ತಾರೆ ಎಂಬ ರೀತಿ ಕಾಂಗ್ರೆಸ್‍ನವರೇ ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‍ಗೆ ಮೆಜಾರಿಟಿ ಬಂದರೆ, ಹೆಚ್ಚು ಸ್ಥಾನ ಗೆದ್ದರೆ ಮಾತ್ರ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯುತ್ತೇನೆ. ಇಲ್ಲದಿದ್ದರೆ ನನ್ನನ್ನು ಬದಲಾವಣೆ ಮಾಡುತ್ತಾರೆ ಎಂಬ ಸಂದೇಶವನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದರು.