Thursday, May 2, 2024
Homeರಾಜ್ಯಇನ್ನುಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ : ಸಿಎಂ ಸಿದ್ದು ಘೋಷಣೆ

ಇನ್ನುಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ : ಸಿಎಂ ಸಿದ್ದು ಘೋಷಣೆ

ಮೈಸೂರು,ಏ.2- ವಯೋಸಹಜ ಕಾರಣಗಳಿಂದಾಗಿ ಇನ್ನುಮುಂದೆ ತಾವು ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೀಗ 77 ವರ್ಷ. ಇನ್ನೂ 4 ವರ್ಷ ಸಮಯವಿದೆ. ಅದು ಮುಗಿಯುವ ವೇಳೆಗೆ 81 ವರ್ಷ ಆಗಲಿದ್ದು, ಆ ಸಂದರ್ಭಕ್ಕೆ ಆರೋಗ್ಯವೂ ಉತ್ತಮವಾಗಿರುವುದಿಲ್ಲ, ಹರ್ಷದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.

1978 ರಲ್ಲಿ ತಾವು ರಾಜಕೀಯಕ್ಕೆ ಬಂದಿದ್ದು, 50 ವರ್ಷ ಕಳೆಯುತ್ತಿದೆ. ಇಷ್ಟು ಸಾಕು. ಮೇಲ್ನೋಟಕ್ಕೆ ನನಗೆ ವಯಸ್ಸಾಗಿದೆ ಎಂದು ಕಾಣದೇ ಇದ್ದರೂ ನನ್ನ ಒಳಗಿನ ಆರೋಗ್ಯದ ಸಾಮರ್ಥ್ಯ ನನಗೆ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿನ್ನೆ ವರುಣಾ ಕ್ಷೇತ್ರದಲ್ಲಿ ಭಾಷಣ ಮಾಡುವಾಗ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ನಮ್ಮ ಕಾರ್ಯಕ್ರಮಗಳನ್ನು ನಿಲ್ಲಿಸಿಬಿಡುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ನಮ್ಮನ್ನು ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 48 ಸಾವಿರ ಮತಗಳ ಲೀಡ್ ಇತ್ತು. ಈ ಬಾರಿ 60 ಸಾವಿರಕ್ಕಿಂತಲೂ ಹೆಚ್ಚಿನ ಲೀಡ್ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.ನಾವು ಜನರ ಬದುಕಿನ ಆಧಾರದ ಮೇಲೆ ಮತ ಕೇಳುತ್ತೇವೆ. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಜನ ನಮ್ಮ ಕಾರ್ಯಕ್ರಮಗಳನ್ನು ನೋಡಿ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಎಷ್ಟೇ ಹಣಕಾಸಿನ ಅಗತ್ಯವಿದ್ದರೂ ಒದಗಿಸಲು ನಮ್ಮ ಸರ್ಕಾರ ಸಿದ್ಧವಿದೆ. ಮೈಸೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಿಸದೇ ಇದ್ದರೂ ಸುಳ್ಳು ವರದಿಯಾಗಿದೆ. ತಮ್ಮಷ್ಟಕ್ಕೇ ತಾವು ಊಹೆ ಮಾಡಿಕೊಂಡು ವರದಿ ಮಾಡುವುದು ಅಪಾಯಕಾರಿ ಎಂದರು.

ಮಾಜಿ ಸಚಿವ ಜನಾರ್ಧನ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಈ ಹಿಂದೆ ಗಣಿ ಹಗರಣದ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ, ವರದಿ ನೀಡಿ ಜನಾರ್ದನ ರೆಡ್ಡಿ ಬಳ್ಳಾರಿಯನ್ನು ರಿಪಬ್ಲಿಕ್ ಮಾಡುತ್ತಿದ್ದಾರೆ ಎಂದು ದೂರಿದ್ದರು. ವರದಿಯಲ್ಲಿ ಸಂತೋಷ್ ಲಾಡ್ ಅಥವಾ ಬಿ.ನಾಗೇಂದ್ರ ಅವರ ಹೆಸರು ಇರಲಿಲ್ಲ. ವರದಿಯ ಬಗ್ಗೆ ತಾವು ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ಯಡಿಯೂರಪ್ಪ ಮತ್ತು ಗಣಿ ಉದ್ಯಮಿಗಳು ನನ್ನ ವಿರುದ್ಧ ಜಗಳಕ್ಕೆ ಬಂದರು. ಆದ ಕಾರಣಕ್ಕೆ ತಾವು ಬಳ್ಳಾರಿಯವರೆಗೂ ಪಾದಯಾತ್ರೆ ಮಾಡಿದ್ದಾಗಿ ತಿಳಿಸಿದರು.

ಅಮಿತ್ ಶಾ ಕುರಿತು ತಮ್ಮ ಪುತ್ರ ಯತೀಂದ್ರ ನೀಡಿದ್ದ ಹೇಳಿಕೆಗೆ ನೋಟೀಸ್ ಬಂದಿದೆ. ಅದಕ್ಕೆ ಉತ್ತರ ನೀಡಲಾಗಿದೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.ಕೆಪಿಎಸ್‍ಸಿಯಲ್ಲಿ ನೇಮಕಾತಿಯ ದಾಖಲಾತಿಗಳು ಕಡಿಮೆಯಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.ತಮಗೆ ಯಾವುದೇ ಆತಂಕವಿಲ್ಲ. ಹಾಗಾಗಿ ಸದಾಕಾಲ ಶಾಂತವಾಗಿರುತ್ತೇನೆ ಎಂದು ಹೇಳಿದರು.

RELATED ARTICLES

Latest News