Tuesday, May 14, 2024
Homeರಾಜಕೀಯಜೆಡಿಎಸ್-ಬಿಜೆಪಿ ಒಗ್ಗೂಡಿಸಿ ರಾಜ್ಯದಲ್ಲಿ ರಣತಂತ್ರ ಹೆಣೆದ ಚುನಾವಣಾ ಚಾಣಕ್ಯ

ಜೆಡಿಎಸ್-ಬಿಜೆಪಿ ಒಗ್ಗೂಡಿಸಿ ರಾಜ್ಯದಲ್ಲಿ ರಣತಂತ್ರ ಹೆಣೆದ ಚುನಾವಣಾ ಚಾಣಕ್ಯ

ಬೆಂಗಳೂರು, ಏ.2- ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ಇಂದು ರಾಜಕೀಯ ಚಾಣಕ್ಯ ಅಮಿತ್ ಷಾ ಅವರ ಸಮ್ಮುಖದಲ್ಲಿ ರಣವ್ಯೂಹ ರೂಪಿಸಿವೆ.

ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್ ಷಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದ ನಂತರ ಕೆಲ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಿ ಪ್ರಸಕ್ತ ರಾಜಕೀಯ ಸನ್ನಿವೇಶಗಳು ಹಾಗೂ ಎದುರಾಳಿ ಕಾಂಗ್ರೆಸ್ ಎದುರಿಸಲು ಬಳಸಬೇಕಾದ ರಣತಂತ್ರಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಪ್ರಸ್ತುತ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಉಂಟಾಗಿರುವ ಭಿನ್ನಮತ ಶಮನಗೊಳಿಸುವಲ್ಲಿ ಈಗಾಗಲೇ ಸಫಲವಾಗಿರುವ ರಾಜ್ಯ ನಾಯಕರೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡು ಮುಂದಿನ ದಿನಗಳಲ್ಲಿ ಜೆಡಿಎಸ್ ಜತೆಗೂಡಿ ಅಬ್ಬರದ ಪ್ರಚಾರಕ್ಕೆ ನೀಲನಕ್ಷೆ ಸಿದ್ಧಪಡಿಸಿದ್ದಾರೆ.

ಬೆಳಗ್ಗೆ ಜೆಡಿಎಸ್-ಬಿಜೆಪಿ ನಾಯಕರೊಂದಿಗೆ ಉಪಾಹಾರ ಕೂಟದಲ್ಲೂ ಒಗ್ಗಟ್ಟು ಪ್ರದರ್ಶಿಸಲಾಯಿತು. ಅನಂತರ ನಡೆದ ಉಭಯ ಪಕ್ಷಗಳ ಸಮನ್ವಯ ಸಭೆಯಲ್ಲೂ ಕೇಂದ್ರ ಸರ್ಕಾರದ 10 ವರ್ಷಗಳ ಸಾಧನೆಯನ್ನು ಮನೆಮನೆಗೆ ತಲುಪಿಸಲು ಮತ್ತು ಮೈತ್ರಿ ನಾಯಕರು ಟೀಕೆಗಳನ್ನು ಮಾಡುವಾಗ ಎಚ್ಚರಿಕೆಯಿಂದಿರುವಂತೆ ತಿಳಿಸಲಾಗಿದೆ.

ಪ್ರಮುಖವಾಗಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸವಾಲಿದ್ದು, ಅದನ್ನು ದಿಟ್ಟವಾಗಿ ಎದುರಿಸಲು ಕೆಲವೊಂದು ರಣವ್ಯೂಹ ರೂಪಿಸಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಹಾಗೂ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಬಿಜೆಪಿ ಹಾಗೂ ಜೆಡಿಎಸ್‍ನ ಕೆಲ ಪ್ರಮುಖ ನಾಯಕರನ್ನು ತನ್ನತ್ತ ಸೆಳೆದಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಪರಸ್ಪರ ಚರ್ಚಿಸಲಾಗಿದೆ.

ಯಾವುದೇ ಕಾರಣಕ್ಕೂ ಎಲ್ಲಿಯೂ ಭಿನ್ನಾಭಿಪ್ರಾಯ ಉಂಟಾಗದಂತೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 400ಕ್ಕೂ ಹೆಚ್ಚು ಸೀಟು ಗೆಲ್ಲುವ ಗುರಿ ತಲುಪಲು ಶ್ರಮಿಸುವಂತೆ ಅಮಿತ್ ಷಾ ಕರೆ ನೀಡಿದ್ದಾರೆ.

ಈ ನಡುವೆ ಎಲ್ಲ 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದ್ದು, ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಿಗೆ ಉತ್ತೇಜನ ನೀಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳ ಪರ ಹಗಲಿರುಳೆನ್ನದೆ ಪ್ರಚಾರ ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಇದರ ನಡುವೆ ಕೆಲ ಲೋಕಸಭಾ ಕ್ಷೇತ್ರಗಳಲ್ಲಿ ಬಂಡಾಯ ಎದ್ದಿರುವ ಕೆಲವು ನಾಯಕರನ್ನು ಕೂಡ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾತನಾಡಿರುವ ಅಮಿತ್ ಷಾ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯನ್ನು ಮತ್ತಷ್ಟು ಭದ್ರಗೊಳಿಸಿ ಚುನಾವಣಾ ರಣರಂಗಕ್ಕೆ ಧುಮುಕಬೇಕು ಎಂದು ತಿಳಿಸಿದ್ದಾರೆ.

ಬಹುತೇಕ ನಾಯಕರು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದು, ನಾಳೆಯಿಂದಲೇ ಅಭ್ಯರ್ಥಿಗಳೊಂದಿಗೆ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಉಭಯ ಪಕ್ಷಗಳ ಸಮನ್ವಯ ಸಭೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‍ದಾಸ್ ಅಗರ್ವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಎಚ್.ಕೆ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ಸಾ.ರಾ.ಮಹೇಶ್, ಸಿ.ಟಿ.ರವಿ ಮೊದಲಾದ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

RELATED ARTICLES

Latest News