ಬೆಂಗಳೂರು,ಏ.2- ಗ್ಯಾರೆಂಟಿಗಳು ಜನರಿಗೆ ತೃಪ್ತಿ ತಂದಿಲ್ಲ, ಬಿಟ್ಟಿ ಭಾಗ್ಯಗಳು ತಮ್ಮ ಕೈ ಹಿಡಿಯುವುದಿಲ್ಲ ಎಂದು ಗ್ಯಾರೆಂಟಿಯಾಗುತ್ತಿದ್ದಂತೆ ಸಿದ್ದರಾಮಯ್ಯನವರು ವರುಣಾದಲ್ಲಿ ಹೆಚ್ಚಿನ ಲೀಡ್ ಕೊಟ್ಟು ಕುರ್ಚಿ ಉಳಿಸುವಂತೆ ಜನರ ಬಳಿ ಅಂಗಲಾಚುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, 2018ರಲ್ಲಿ ಸೋಲಿನ ಭಯದಿಂದ ತಮ್ಮ ಸ್ವಕ್ಷೇತ್ರ ವರುಣಾದಿಂದ ಬಾದಾಮಿಗೆ ಪಲಾಯನ ಮಾಡಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಈಗ ಮತ್ತೊಮ್ಮೆ ಸ್ವಕ್ಷೇತ್ರದ ಜನರಿಂದ ತಿರಸ್ಕಾರದ ಭಯ ಕಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ತವರು ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲಾದರೆ ಕುರ್ಚಿ ಬಿಟ್ಟು ಇಳಿಯಬೇಕಾಗುತ್ತದೆ ಎಂದು ಸಿಕ್ಕಸಿಕ್ಕ ಸಣ್ಣಪುಟ್ಟ ವಿಪಕ್ಷಗಳ ಮುಖಂಡರನ್ನೆಲ್ಲ ಕಾಂಗ್ರೆಸ್‍ಗೆ ಸೇರಿಸಿಕೊಂಡು ಕನಿಷ್ಠ ಪಕ್ಷ ಠೇವಣಿ ಉಳಿಸಿಕೊಳ್ಳಬೇಕು, ಸೋಲಿನ ಅಂತರವಾದರೂ ಕಡಿಮೆ ಮಾಡಿಕೊಳ್ಳಬೇಕೆಂದು ಸಿದ್ದರಾಮಯ್ಯನವರು ಮೂರು ದಿನ ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ ಅಪಹಾಸ್ಯ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ನಿನ್ನೆ ವರುಣಾದಲ್ಲಿ ತಮ್ಮ ಬುರುಡೆ ಭಾಷಣ ಕೇಳಲು ಆಸಕ್ತಿ ಇಲ್ಲದೆ ಜಾಗ ಖಾಲಿ ಮಾಡಿದ ಜನರ ನಡೆ ನೋಡಿದ ಮೇಲೆ ಜನರ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಮೂಡುತ್ತಿವೆ. ನಿಮ್ಮ ಗ್ಯಾರೆಂಟಿಗಳು ಜನರನ್ನು ತಲುಪಿದೆ ಎನ್ನುವ ವಿಶ್ವಾಸವಿಲ್ಲವೇ? ಮೈಸೂರಿನಲ್ಲಿ ಹೀನಾಯವಾಗಿ ಸೋಲಿಸಿ ನಿಮ್ಮನ್ನು ಕುರ್ಚಿಯಿಂದ ಇಳಿಸಬೇಕು ಎನ್ನುವ ಹುನ್ನಾರದಿಂದ ಸ್ವಪಕ್ಷದವರೇ ಒಳೇಟು ನೀಡುವ ಭಯ ಕಾಡುತ್ತಿದೆಯೇ ಎಂಬ ಪಶ್ನೆ ಎದ್ದಿದೆ ಎಂದಿದ್ದಾರೆ.
ವರುಣಾದಲ್ಲಿ 60,000 ಲೀಡ್ ಬರದಿದ್ದರೆ ಕುರ್ಚಿಯಿಂದ ಇಳಿಯಬೇಕು ಎಂದು ಹೈಕಮಾಂಡ್ ಈಗಾಗಲೇ ಫರ್ಮಾನು ಹೊರಡಿಸಿದೆಯೇ? ಕರ್ನಾಟಕದ ಜನತೆ ತಮ್ಮ ಉತ್ತರಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.