Saturday, May 4, 2024
Homeರಾಜ್ಯಕೆಪಿಸಿಸಿ ಪುನಾರಚನೆ ಬೆನ್ನಲ್ಲೇ ಶುರುವಾಯ್ತು ಅಸಮಾಧಾನ

ಕೆಪಿಸಿಸಿ ಪುನಾರಚನೆ ಬೆನ್ನಲ್ಲೇ ಶುರುವಾಯ್ತು ಅಸಮಾಧಾನ

ಬೆಂಗಳೂರು,ಏ.2- ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಯ ಬೆನ್ನಲ್ಲೇ ಅಸಮಾಧಾನ ಹೊಗೆಯಾಡಲಾರಂಭಿಸಿದ್ದು, ಜಿಲ್ಲಾಧ್ಯಕ್ಷರ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಇಂದು ಬೆಳಿಗ್ಗೆ ಪ್ರಕಟಿಸಲಾದ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷ 43 ಉಪಾಧ್ಯಕ್ಷರು, 138 ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ನಿಯೋಜಿಸಿದೆ.

ನಿನ್ನೆ 7 ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿತ್ತು. ಅದಕ್ಕೂ ಮುನ್ನ ಐವರು ಕಾರ್ಯಾಧ್ಯಕ್ಷರುಗಳನ್ನು ನೇಮಿಸಲಾಗಿದೆ. ರಾಜ್ಯ ನಾಯಕರು ಸಾಮಾಜಿಕ ನ್ಯಾಯವನ್ನು ಆಧಾರವಾಗಿಟ್ಟುಕೊಂಡು ನೇಮಕಾತಿ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಹಾಗೂ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.

ಉಡುಪಿ ಮತ್ತು ರಾಯಚೂರು ಜಿಲ್ಲಾಧ್ಯಕ್ಷ ಬದಲಾವಣೆಗೆ ಸ್ಥಳೀಯವಾಗಿ ಆಕ್ಷೇಪಗಳು ಕೇಳಿಬಂದಿವೆ. ರಾಯಚೂರು ಜಿಲ್ಲಾಧ್ಯಕ್ಷರ ನೇಮಕದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದ್ದರೆ, ಉಡುಪಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ನೇಮಕಾತಿಗಳು ಭಾರೀ ಸಂಚಲನ ಸೃಷ್ಟಿಸಿವೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರು, ನಿಗಮ ಮಂಡಳಿಗಳಲ್ಲಿ ಅವಕಾಶ ಸಿಗದೇ ಇದ್ದವರಿಗೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಆಕಾಂಕ್ಷಿಗಳಾಗಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿಸಿಕೊಂಡವರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಾಯಕತ್ವದ ನಿರ್ಧಾರಗಳನ್ನು ಪ್ರಶ್ನಿಸಿ ತಿರುಗಿಬಿದ್ದಿರುವ ಕೆಲ ಪ್ರಮುಖರನ್ನು ನೂತನ ಪಟ್ಟಿಯಿಂದ ಕೈಬಿಡಲಾಗಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ವಿರುದ್ಧ ಕಣಕ್ಕಿಳಿಯುವ ಬಂಡಾಯ ಅಭ್ಯರ್ಥಿಯಾಗಿ ಮುನ್ಸೂಚನೆ ನೀಡಿದ್ದ ವೀಣಾ ಕಾಶಪ್ಪನವರ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಮಂಡ್ಯದಲ್ಲಿ ಬಂಡಾಯ ಸಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಡಾ.ರವೀಂದ್ರ ಅವರಿಗೆ ಪದಾಧಿಕಾರಿ ಹುದ್ದೆಯಿಂದ ಕೊಕ್ ನೀಡಲಾಗಿದೆ.

ಕೋಲಾರದಲ್ಲಿ ಅವಕಾಶ ವಂಚಿತರಾದ ಮುದ್ದು ಗಂಗಾಧರ್ ಅವರಿಗೆ ಕಾರ್ಯದರ್ಶಿ ಹುದ್ದೆಯಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಹಲವಾರು ನೇಮಕಾತಿಗಳು ಅತೃಪ್ತರನ್ನು ಸಮಾಧಾನಪಡಿಸುವ ಸಲುವಾಗಿ ನಡೆದಿದ್ದು, ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕತೆಗೆ ಆದ್ಯತೆ ನೀಡಲಾಗಿದೆ. ಅದರ ಹೊರತಾಗಿಯೂ ಕೆಲವರಿಗೆ ಅವಕಾಶ ಸಿಕ್ಕಿಲ್ಲ. ಮತ್ತೆ ಕೆಲವು ಕಡೆ ಪಕ್ಷನಿಷ್ಠರಿಗೆ ಮಣೆ ಹಾಕಿಲ್ಲ ಎಂಬ ದೂರುಗಳು ಕಂಡುಬಂದಿವೆ.ಯಥಾರೀತಿ ಕುಟುಂಬ ರಾಜಕಾರಣ ಮತ್ತು ಪ್ರಭಾವಿಗಳ ಮಕ್ಕಳಿಗೆ ಆದ್ಯತೆ ನೀಡಲಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ.

RELATED ARTICLES

Latest News