ದೊಡ್ಡಬಳ್ಳಾಪುರ,ಅ.16- ಮೈಸೂರು ದಸರಾ ಕಾರ್ಯಕ್ರಮಕ್ಕೆ ತೆರಳಿ ಹಿಂದಿರುಗುತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ ಕೆಪಿಎ ಅಧ್ಯಕ್ಷ ನಾಗೇಶ್ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ತಡರಾತ್ರಿ ನಡೆದಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಚೆನ್ನದೇವಿ ಅಗ್ರಹಾರ ಬಳಿ ತಡರಾತ್ರಿ ಸುಮಾರು 1.30ರ ವೇಳೆಗೆ ಅಪಘಾತ ಸಂಭವಿಸಿದೆ.ಲಭ್ಯ ಮಾಹಿತಿಯ ಪ್ರಕಾರ, ಕಾರು ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ನಿದ್ರೆಯ ಮಂಪರು ಬಂದಿದ್ದು, ಈ ವೇಳೆ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಚಲಿಸಿದ ಕಾರು ಬಳಿಕ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಕೆಪಿಎ ಅಧ್ಯಕ್ಷ ನಾಗೇಶ್ ಅವರ ಒಂದು ಕಾಲಿನ ಮೂಳೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಪಿಎ ಮಾಜಿ ನಿರ್ದೇಶಕ ಉಮಾಶಂಕರ್ ಅವರ ಮಂಡಿಯ ಕೆಳಭಾಗದ ಕಾಲಿನ ಮೂಳೆ ಮುರಿದಿದೆ ಎಂದು ಹೇಳಲಾಗಿದೆ.
ಕಾರಿನ ಹಿಂಬದಿ ಆಸನದಲ್ಲಿದ್ದ ಇನ್ನಿಬ್ಬರಿಗೂ ಗಾಯಗಳಾಗಿದ್ದು, ಅವರಲ್ಲಿ ಒಬ್ಬರ ತೊಡೆಯ ಮೂಳೆ ಮುರಿದಿದೆ. ಮತ್ತೊಬ್ಬರ ಮೂಗಿನ ಮೂಳೆಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
