ಚಿಕ್ಕಮಗಳೂರು,ನ.29- ಹಾಸನ ಜಿಲ್ಲೆಯ ಬೇಲೂರಿನಿಂದ ಚಿಕ್ಕಮಗಳೂರಿನ ಮೂಡಿಗೆರೆಗೆ ಆಗಮಿಸಿರುವ ಕಾಡಾನೆಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ವಿಚಾರವಾಗಿ ರಾಜ್ಯ ಸರ್ಕಾರದ ದ್ವಂದ್ವ ನಿಲುವನ್ನು ಖಂಡಿಸಿರುವ ವಿಧಾನಪರಿಷತ್ ಸದಸ್ಯ ಡಾ.ರವಿ.ಸಿ.ಟಿ, ನ.30ರಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜನಪ್ರತಿನಿಧಿಗಳ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ
ಈ ಕುರಿತು ಅರಣ್ಯ ಸಚಿವರಿಗೆ ಪತ್ರ ಬರೆದಿರುವ ಅವರು, ಆನೆಗಳ ಸ್ಥಳಾಂತರದ ಬಗ್ಗೆ ಸಾಧಕ-ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸದೆ ಸರ್ಕಾರ ಏಕಾಏಕಿ ನಿರ್ಧಾರ ಕೈಗೊಂಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಡಾನೆಗಳ ಹಾವಳಿಯಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಮತ್ತಷ್ಟು ಆನೆಗಳನ್ನು ಸ್ಥಳಾಂತರಿಸುವುದು ಸೂಕ್ತ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆನೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ಸರ್ಕಾರ ಹೇಳಿಕೆ ನೀಡಿದ್ದು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತ್ತು. ಅದರಂತೆ ನವೆಂಬರ್ 21ರಂದು ಸಭೆಯ ಸೂಚನೆ ಹೊರಡಿಸಿ, ನ.30ರಂದು ಸಭೆ ನಿಗದಿಪಡಿಸಲಾಗಿದೆ. ಆದರೆ, ಸರ್ಕಾರದ ಈ ನಿಲುವಿಗೆ ವ್ಯತಿರಿಕ್ತವಾಗಿ ನವೆಂಬರ್ 26ರಂದು ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿಗಳು ಅಧಿಕೃತ ಜ್ಞಾಪನ ಹೊರಡಿಸಿ, ಆಪರೇಷನ್ ಗಜ ಕಾರ್ಯಾಚರಣೆಗೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಒಂದೆಡೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೆ, ಮತ್ತೊಂದೆಡೆ ಅದೇ ಕಾರ್ಯಾಚರಣೆ ನಡೆಸಲು ಸಿಬ್ಬಂದಿಯನ್ನು ನಿಯೋಜಿಸಿರುವುದು ಅತ್ಯಂತ ಖಂಡನೀಯ. ಸರ್ಕಾರ ಈಗಾಗಲೇ ಆನೆಗಳ ಸ್ಥಳಾಂತರದ ಬಗ್ಗೆ ನಿರ್ಧಾರ ಕೈಗೊಂಡು, ಅದನ್ನು ಸಮರ್ಥಿಸಿಕೊಳ್ಳಲು ನೆಪಮಾತ್ರಕ್ಕೆ ಸಭೆ ಕರೆದಿರುವ ಅನುಮಾನ ಮೂಡಿದೆ. ಇಂತಹ ಸಭೆಯಲ್ಲಿ ಭಾಗವಹಿಸುವುದು ಸರ್ಕಾರದ ಪೂರ್ವನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದಂತಾಗುತ್ತದೆ. ಹೀಗಾಗಿ ಸಭೆಗೆ ಹಾಜರಾಗದೆ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಪ್ರತಿವರ್ಷ ಕಾಡಾನೆಗಳ ಹಿಂಡು ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸಿ ರೈತರ ಕಾಫಿ, ಅಡಿಕೆ, ಭತ್ತ, ಮೆಣಸು ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸುತ್ತಿದೆ. ಅಡಿಕೆ ಸಸಿ ಫಸಲು ನೀಡಲು 7ರಿಂದ 8 ವರ್ಷ ಹಾಗೂ ಕಾಫಿ ಗಿಡ ಫಸಲು ನೀಡಲು 5ರಿಂದ 6 ವರ್ಷ ಬೇಕಾಗುತ್ತದೆ. ರೈತರು ಹತ್ತಾರು ವರ್ಷಗಳ ಪರಿಶ್ರಮದಿಂದ ಬೆಳೆಸಿದ ತೋಟಗಳು ಹಾನಿಗೀಡಾದಾಗ ಸರ್ಕಾರ ನೀಡುವ ಪರಿಹಾರ ಅತ್ಯಲ್ಪವಾಗಿದ್ದು, ವಾಸ್ತವ ನಷ್ಟವನ್ನು ಪರಿಗಣಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
