Homeರಾಜ್ಯಜಿಲ್ಲಾಧಿಕಾರಿ ವಿರುದ್ಧ HDK ತೀವ್ರ ಅಸಮಾಧಾನ, ಭೂಮಿ ಕೊಡಲು ಜ.10ರವರೆಗೆ ಗಡುವು

ಜಿಲ್ಲಾಧಿಕಾರಿ ವಿರುದ್ಧ HDK ತೀವ್ರ ಅಸಮಾಧಾನ, ಭೂಮಿ ಕೊಡಲು ಜ.10ರವರೆಗೆ ಗಡುವು

ಮಂಡ್ಯ,ನ.29- ಜಿಲ್ಲೆಗೆ ಬರಬೇಕಿದ್ದ ಪ್ರತಿಷ್ಠಿತ ಎಲ್‌ಆರ್‌ಎ ಪರೀಕ್ಷಾ ಕೇಂದ್ರ ಸ್ಥಾಪನೆಗೆ ರೆಕ್‌ ಆಯಂಗಲ್‌ ಮಾದರಿಯಲ್ಲಿ 100 ಎಕರೆ ಭೂಮಿ ಬೇಕು ಎಂದು ಕೇಳುತ್ತಾ ಬಂದಿದ್ದರೂ ಜಿಲ್ಲಾಡಳಿತ ಗುರುತಿಸಿರುವ ಜಾಗದಲ್ಲಿ ಖಾಸಗಿ ಭೂಮಿ ಇರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಮತ್ತು ಎಲ್‌ಆರ್‌ಎ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ , ಮಂಡ್ಯ ತಾಲೂಕು ಬಸರಾಳು ಸಮೀಪದ ಮುದ್ದನಘಟ್ಟ-ಹೆಗ್ಗಡಹಳ್ಳಿ ಗ್ರಾಮಗಳಲ್ಲಿ 105 ಎಕರೆ ಸರ್ಕಾರಿ ಭೂಮಿ ಇದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಕೇವಲ 66 ಎಕರೆ ಮಾತ್ರ ಖಾಲಿ ಇದ್ದು, ಉಳಿದ 34 ಎಕರೆ ಖಾಸಗಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಅನಿವಾರ್ಯ ಎಂದು ಎಲ್‌ಆರ್‌ಎ ಅಧಿಕಾರಿಗಳು ಹೇಳಿದ್ದು ಸಚಿವರ ಆಕ್ರೋಶಕ್ಕೆ ಕಾರಣವಾಯಿತು.

ರಾಜ್ಯ ಸರ್ಕಾರದ ಅಂಗಳದಲ್ಲಿ ಈಗ ಎಲ್‌ಆರ್‌ಎ ಚೆಂಡು ಇದೆ. ಸರ್ಕಾರ ನಿಗದಿತ ಅವಧಿಯೊಳಗೆ ಭೂಮಿ ಕೊಟ್ಟರೆ ಕೆಲಸ ತಕ್ಷಣ ಆರಂಭವಾಗಲಿದೆ. ಭೂಮಿ ಕೊಡುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ, ಸರ್ಕಾರಕ್ಕೆ ಇದೆ. ಜ.10ರವರೆಗೆ ಗಡುವು ನೀಡುತ್ತೇನೆ. ಆ ವೇಳೆಗೆ 134 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಟ್ಟರೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಸಚಿವರು ಖಚಿತವಾಗಿ ಹೇಳಿದರು. ಮುಂದಿನ ಮಾರ್ಚ್‌ ವೇಳೆಗೆ ಕಾಮಗಾರಿ ಆರಂಭಗೊಳ್ಳದಿದ್ದರೆ ಹಣ ವಾಪಸಾಗಲಿದೆ. ಬೇರೆ ಜಿಲ್ಲೆ ಅಥವಾ ಹೊರರಾಜ್ಯದವರ ಪಾಲಾದರೂ ಆಶ್ಚರ್ಯವಿಲ್ಲ ಎಂದು ಎಚ್ಚರಿಸಿದರು.

ಒಂದು ವರ್ಷದಿಂದಲೂ ಎಲ್‌ಆರ್‌ಎ ಅಧಿಕಾರಿಗಳು ನಿರಂತರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದಾರೆ. ಎಲ್‌ಆರ್‌ಎ ನಿಯಮಾವಳಿಗಳು ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ? ಪ್ರಸ್ತಾವನೆ ಸಲ್ಲಿಸುವ ಸಮಯದಲ್ಲೇ ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಳುಹಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು. ಸಚಿವರ ವಿಶೇಷ ಕರ್ತವ್ಯಾಧಿಕಾರಿ ರಘು ಅವರು, ನಾವು ಆರಂಭದಿಂದಲೂ ರೆಕ್ಟ್‌ ಆಯಂಗಲ್‌ ವಿನ್ಯಾಸದಲ್ಲಿ 100 ಎಕರೆ ಭೂಮಿ ಬೇಕು ಎಂದು ಕೇಳುತ್ತಾ ಬಂದಿದ್ದೇವೆ. ನೀವು ಮೂರು ಮಾದರಿಯ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದೀರಿ. ಆಗ ಖಾಸಗಿ ಭೂಮಿ ಇರುವ ವಿಷಯವನ್ನು ತೋರಿಸದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್‌ ಉತ್ತರಿಸಿ, ಮೊದಲ ಹಂತದಲ್ಲಿ ಖಾಲಿ ಇರುವ ಸರ್ಕಾರಿ ಜಾಗವನ್ನು ತೋರಿಸಿದ್ದೇವೆ. ಎರಡನೇ ಹಂತದಲ್ಲಿ ಖಾಸಗಿ ಭೂಮಿ ಇರುವುದನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಜಿಲ್ಲೆಯ ಜನರ ಋಣ ತೀರಿಸಲು ದೊಡ್ಡ ಮಟ್ಟದ ಯೋಜನೆಯೊಂದನ್ನು ಜಾರಿಗೊಳಿಸುವುದಕ್ಕೆ ಮುಂದಾಗಿದ್ದೆ. ಆದರೆ, ಸರ್ಕಾರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಎಲ್‌ಆರ್‌ಎ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಹಾಸನ, ತುಮಕೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣದಂತಹ ರಾಜ್ಯಗಳು ರೆಡ್ಕಾರ್ಪೆಟ್‌ ಹಾಕಿಕೊಂಡು ಕಾದುಕುಳಿತಿವೆ ಎಂದು ಹೇಳಿದರು. ರಾಜ್ಯ ಸರ್ಕಾರ ಎಲ್‌ಆರ್‌ಎ ಬಗ್ಗೆ ದಿವ್ಯನಿರ್ಲಕ್ಷ್ಯ ತೋರುತ್ತಿದೆ. ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸಿದ ಬಳಿಕ ಅದು ಭೂಮಿಯನ್ನು ಅಭಿವೃದ್ಧಿಪಡಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸಿದರೆ ಯೋಜನೆಗೆ ಅಡ್ಡಿ ಹಾಕಲು ಅನುಮತಿಯಾದಂತಾಗುತ್ತದೆ. ಇದೇ ರೀತಿ ವಿಳಂಬ ಮಾಡಿದರೆ ಯೋಜನೆ ಕೈತಪ್ಪಿಹೋಗಲಿದೆ ಎಂದು ಎಚ್ಚರಿಸಿದರು.

ರೈಲ್ವೆ ಎಂಜಿನ್‌, ಬುಲ್ಡೋಜರ್‌, ಜೆಸಿಬಿ, ಟ್ರ್ಯಾಕ್ಟರ್‌ ಸೇರಿದಂತೆ ಭಾರೀ ಗಾತ್ರದ ವಾಹನಗಳ ಪರೀಕ್ಷೆಗಳು ಈ ಕೇಂದ್ರದಲ್ಲಿ ನಡೆಯಲಿವೆ. ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರ ಮಹತ್ವವೇ ಸರ್ಕಾರ ಮತ್ತು ಇಲ್ಲಿನ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ಎಡಿಸಿ ಬಿ.ಆರ್‌.ರೂಪ, ಎಲ್‌ಆರ್‌ಎ ಹಿರಿಯ ನಿರ್ದೇಶಕ ಶಶಿಕಾಂತ್‌, ಪಂಕಜ್‌, ಸಚಿವರ ವಿಶೇಷ ಕರ್ತವ್ಯಾಧಿಕಾರಿ, ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ, ಶಾಸಕರು, ಮಾಜಿ ಸಚಿವ ಸಿ.ಎಸ್‌‍.ಪುಟ್ಟರಾಜು, ಮಾಜಿ ಶಾಸಕ ಕೆ.ಸುರೇಶ್ಗೌಡ, ಬಿ.ಆರ್‌.ರಾಮಚಂದ್ರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News