Homeಇದೀಗ ಬಂದ ಸುದ್ದಿಕ್ಷೇತ್ರ ಮರು ವಿಂಗಡಣೆಗೆ ಡಿಎಂಕೆ, ಎನ್‌ಸಿಪಿ ಬೆಂಬಲ: ಬಹುಮತದ ವಿಶ್ವಾಸ

ಕ್ಷೇತ್ರ ಮರು ವಿಂಗಡಣೆಗೆ ಡಿಎಂಕೆ, ಎನ್‌ಸಿಪಿ ಬೆಂಬಲ: ಬಹುಮತದ ವಿಶ್ವಾಸ

ನವದೆಹಲಿ,ನ.28-ದೇಶದ ಜನತೆಯೇ ಕಾತರದಿಂದ ಎದುರು ನೋಡುತ್ತಿರುವ ಬಹುನಿರೀಕ್ಷಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಮಸೂದೆಗೆ ಡಿಎಂಕೆ ಬೆಂಬಲ ಸೂಚಿಸಿದ್ದು, ಅಂಗೀಕಾರಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳೆಲ್ಲವೂ ಬಹುತೇಕ ನಿವಾರಣೆಯಾಗಿವೆ. ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಮರುವಿಗಂಡಣೆ (ಸಂವಿಧಾನ ತಿದ್ದುಪಡಿ) ಕಾಯ್ದೆಗೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ಬಹಿರಂಗವಾಗಿ ಘೋಷಣೆ ಮಾಡಿರುವುದರಿಂದ ಆಡಳಿತಾರೂಢ ಎನ್‌ಡಿಎ ಅಗತ್ಯವಾಗಿರುವ ಮ್ಯಾಜಿಕ್‌ ಸಂಖ್ಯೆಯನ್ನು ತಲುಪುವ ಸನಿಹದತ್ತ ಧಾವಿಸಿದೆ.

ಈಗಾಗಲೇ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಹಾಗೂ ಆಂಧ್ರಪ್ರದೇಶದ ವೈಎಸ್‌‍ಆರ್‌ಪಿ ಮಸೂದೆಗೆ ಬೆಂಬಲ ಸೂಚಿಸಿರುವುದರಿಂದ ತಿದ್ದುಪಡಿ ಮಸೂದೆಗೆ ಬೇಕಾಗಿದ್ದ 3/2ರಷ್ಟು ಅಂದರೆ 360 ಸದಸ್ಯ ಬೆಂಬಲವನ್ನು ಪಡೆಯುವಲ್ಲಿ ಪ್ರಧಾನಿ ನರೇಂದ್ರಮೋದಿ ಬಹುತೇಕ ಯಶಸ್ವಿಯಾಗಿದ್ದಾರೆ. ಡಿಎಂಕೆ, ಎನ್‌ಸಿಪಿ, ಎನ್‌ಸಿ, ವೈಎಸ್‌‍ಆರ್‌ಸಿ ಹಾಗೂ ಟಿಎಂಸಿ ಕೂಡ ಬೆಂಬಲ ಸೂಚಿಸುವ ಸಾಧ್ಯತೆ ಇರುವುದರಿಂದ ಲೋಕಸಭೆಯಲ್ಲಿ ಮಸೂದೆ ಯಾವುದೇ ವಿಘ್ನವಿಲ್ಲದೆ ಅಂಗೀಕಾರವಾಗುವ ಸಂಭವ ಹೆಚ್ಚಾಗಿದೆ.

ಈವರೆಗೂ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಡಿಎಂಕೆ ಇದೀಗ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡು ಕೇಂದ್ರ ಸರ್ಕಾರದ ಪ್ರಸ್ತಾವಿತ ಮಸೂದೆಗೆ ಬೆಂಬಲ ಘೋಷಿಸಿದೆ.
ಡಿಎಂಕೆಯ 22 ಲೋಕಸಭಾ ಸದಸ್ಯರು ಮಸೂದೆಯನ್ನು ಬೆಂಬಲಿಸುವುದಾಗಿ ಘೋಷಿಸಿರುವುದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಸಂಖ್ಯಾಬಲದ ಲೆಕ್ಕಾಚಾರಕ್ಕೆ ಹೊಸ ಆಯಾಮ ನೀಡಿದೆ.
ಡಿಎಂಕೆ ಸಂಸದರ ಸಭೆಯಲ್ಲಿ ಹೊಸ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಲು ನಿರ್ಧರಿಸಲಾಯಿತು. ಸಭೆಯ ಬಳಿಕ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಎಕ್‌್ಸನಲ್ಲಿ ತಮ ನಿರ್ಧಾರವನ್ನು ಪ್ರಕಟಿಸಿದರು.
ಕಳೆದ ಏಪ್ರಿಲ್‌ನಲ್ಲಿ ಮಸೂದೆಯನ್ನು ವಿರೋಧಿಸಲು ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಹೊಸ ಪ್ರಸ್ತಾವನೆಯಲ್ಲಿ ಲಿಖಿತವಾಗಿ ಸೇರಿಸಲಾಗಿದೆ ಎಂದು ಸ್ಟಾಲಿನ್‌ ಹೇಳಿದ್ದಾರೆ.

ನವೆಂಬರ್‌ 27ರಂದು ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಹೊಸ ಪ್ರಸ್ತಾವನೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾಪವಿದೆ.
ಕೇಂದ್ರದ ಅಧಿಕೃತ ವಿವರಣೆಯ ಪ್ರಕಾರ, ಈ ಹೆಚ್ಚಳ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಕರೂಪವಾಗಿ ಅನ್ವಯವಾಗಲಿದೆ. ಇದರಿಂದ ರಾಜ್ಯಗಳ ನಡುವಿನ ಈಗಿನ ಸಾಪೇಕ್ಷ ಸ್ಥಾನ ಹಂಚಿಕೆಯ ಅನುಪಾತವನ್ನು ಉಳಿಸಿಕೊಳ್ಳುವ ಉದ್ದೇಶವಿದೆ. ಹೊಸ ಪ್ರಸ್ತಾವನೆಯಡಿ ಶೇ.50ರಷ್ಟು ಹೆಚ್ಚಳವಾದರೆ ತಮಿಳುನಾಡಿನ ಲೋಕಸಭೆಯ ಸ್ಥಾನಗಳ ಸಂಖ್ಯೆ 39ರಿಂದ 59ಕ್ಕೆ ಏರಿಕೆಯಾಗಲಿದೆ.

ಲೋಕಸಭೆಯಲ್ಲಿ ಡಿಎಂಕೆ 22 ಸದಸ್ಯರನ್ನು ಹೊಂದಿದೆ. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು ಬೆಂಬಲ ಅಗತ್ಯವಿರುವುದರಿಂದ ಪ್ರಾದೇಶಿಕ ಪಕ್ಷಗಳ ಬೆಂಬಲವೂ ಮಹತ್ವ ಪಡೆದುಕೊಳ್ಳುತ್ತದೆ. ಕೇಂದ್ರ ಗೃಹಸಚಿವ ಅಮಿತ್‌ ಷಾ ಅವರು ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳ ಮೈತ್ರಿಯನ್ನು ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಹಲವು ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸಿದ್ದು, ದಕ್ಷಿಣ ಭಾರತದ ಪ್ರಮುಖರು ಎತ್ತಿದ್ದ ಆತಂಕವನ್ನು ನಿವಾರಣೆ ಮಾಡಿದ್ದಾರೆ.

ಡಿಎಂಕೆ, ವೈಎಸ್‌‍ಆರ್‌ಪಿ ಬೆಂಬಲ ಕೊಟ್ಟಿರುವುದರಿಂದ ತೆಲಂಗಾಣದ ಬಿಎಸ್‌‍ಆರ್‌ ಕೂಡ ಯಾವುದೇ ಸಂದರ್ಭದಲ್ಲಿ ತನ್ನ ನಿಲುವು ಪ್ರಕಟಿಸುವ ಸಂಭವಿದೆ. ಉಳಿದಂತೆ ಆಂಧ್ರಪ್ರದೇಶದ ಟಿಡಿಪಿ, ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನೆ ಬಹಿರಂಗವಾಗಿಯೇ ಬೆಂಬಲ ನೀಡಿವೆೆ. ಪಶ್ಚಿಮ ಬಂಗಾಳದಲ್ಲಿ ವಿಭಜನೆಯಾಗಿರುವ ಟಿಎಂಸಿಯ ಒಂದು ಬಣ ಎನ್‌ಸಿಪಿಐ ಎನ್‌ಡಿಎಗೆ ಬೆಂಬಲ ಘೋಷಿಸಿದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆಯಾಗಲಿರುವ ಈ ಮಸೂದೆಗೆ 3/2ರಷ್ಟು ಬಹುಮತ ನಿರಾಯಾಸವಾಗಿ ದೊರಕಲಿದೆ.

RELATED ARTICLES

Latest News