ಬೆಂಗಳೂರು,ನ.28- ಚಿಕ್ಕಜಾಲ ಠಾಣೆ ಇನ್ಸ್ಪೆಕ್ಟರ್ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ನರೇಶ್ ಪಿಜಿ ಅಷ್ಟೇ ಅಲ್ಲದೇ ದಾರಿಯಲ್ಲಿ ಹೋಗುವ ಯುವತಿಯರ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ತಿಳಿಸಿದರು. ಗುಂಡು ಹಾರಿಸಿದ ಸ್ಥಳಕ್ಕೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಆರೋಪಿ ಹಾರ್ಡ್ಕೋರ್ ಕ್ರಿಮಿನಲ್. 2021 ರಿಂದಲೂ ಈತನ ಮೇಲೆ ಪ್ರಕರಣಗಳಿವೆ.
ಕಳೆದ ವರ್ಷ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಯುವತಿ ಮೇಲೆ ದೌರ್ಜನ್ಯವೆಸಗಿದ ಆತನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿ ಜೈಲಿಗೆ ಕಳುಹಿಸಿದರು. ಜೈಲಿನಲ್ಲಿದ್ದು ಹೊರಬಂದ ಮೇಲೆ ವಾರೆಂಟ್ ಇದ್ದುದ್ದರಿಂದ ಮದನಪಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಎಂಟು ದಿನಗಳ ಹಿಂದೆಯಷ್ಟೆ ಹೊರ ಬಂದು ಆರೋಪಿ ಮತ್ತೆ ಅದೇ ರೀತಿಯ ನಗರದಲ್ಲಿ ಮೂರ್ನಾಲ್ಕು ಕೃತ್ಯ ಮಾಡಿದ್ದಾನೆ. ಆಂಧ್ರದ ರಿಜಿಸ್ಟ್ರೇಷನ್ ಹೊಂದಿರುವ ತನ್ನ ಬೈಕ್ನಲ್ಲೇ ನಗರಕ್ಕೆ ಬಂದು ಸುತ್ತಾಡುತ್ತ ಒಂಟಿಯಾಗಿ ಹೋಗುವ ಮಹಿಳೆಯರ ಮೊಬೈಲ್ ಎಗರಿಸುವುದು, ಲೈಂಗಿಕ ದೌರ್ಜನ್ಯವ್ಯಸಗಿ ಪರಾರಿಯಾಗುತ್ತಿದ್ದನು.
ಲೇಡಿಸ್ ಪಿಜಿಗೆ ನುಗ್ಗಿ ಪರಾರಿಯಾದ ಬಗ್ಗೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡಿದ್ದ ದೃಶ್ಯವನ್ನಾಧರಿಸಿ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ. ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಒಂಬತ್ತು ಮೊಬೈಲ್ಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದರು.
12 ವರ್ಷದ ಹಿಂದೆ ಆತನ ಮದುವೆಯಾಗಿದೆ. ಆತನ ವರ್ತನೆಯಿಂದ ಬೇಸತ್ತು ಪತ್ನಿ ಬಿಟ್ಟು ಹೋಗಿದ್ದಾರೆ ಎಂದರು. ಧೈರ್ಯವಾಗಿ ದೂರು ನೀಡಿ: ಈ ರೀತಿಯ ಕೃತ್ಯ ನಡೆದಾಗ ಸಂತ್ರಸ್ತರು ಕೂಡಲೇ ಪೊಲೀಸ್ ಠಾಣೆಗೆ ಬಂದು ದೂರು ಕೊಡಿ ನಿಮ ರಕ್ಷಣೆಗೆ ಪೊಲೀಸ್ ಇಲಾಖೆ ಇದ್ದೇ ಇದೆ. ಅದರಲ್ಲೂ ಮಹಿಳೆಯ ರಕ್ಷಣೆ ನಮ ಆಧ್ಯತೆ ಎಂದು ಅವರು ಹೇಳಿದರು.
ಮಹಿಳೆಯರ ಸುರಕ್ಷತೆಗೆ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅಷ್ಟು ಕ್ರಮಗಳನ್ನು ಖಂಡಿತವಾಗಿ ತೆಗೆದುಕೊಳ್ಳುತ್ತೇವೆ. ಲೇಡಿಸ್ ಪಿಜಿಗಳಲ್ಲಿ ಮಾಲೀಕರು ಸೂಕ್ತ ರಕ್ಷಣೆ ಕೊಡಬೇಕು. ಪಿಜಿಯೊಳಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುವುದರ ಬಗ್ಗೆ ನಿಗಾ ಇಡಬೇಕು, ಮಾಲೀಕರ ಬಳಿ ಮಾತ್ರ ಕೀ ಇರಬೇಕು, ಪ್ರಮುಖವಾಗಿ ಬಯೋಮೆಟ್ರಿಕ್ ಮಾಡಿದರೆ ಹೊರಗಿನವರು ಯಾರೂ ಪಿಜಿಯೊಳಗೆ ಬರುಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.
