ನವದೆಹಲಿ, ನ. 29-ಪೂರ್ವ ದೆಹಲಿಯ ವಿಶ್ವಾಸ್ ನಗರದಲ್ಲಿರುವ ವಸತಿ ಸಂಕೀರ್ಣದ ಇ-ರಿಕ್ಷಾ ನಿಲುಗಡೆ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ 4.15ರ ಸುಮಾರಿಗೆ ಸಿಬಿಡಿ ಶಹದಾರ ಪ್ರದೇಶದ ಯೂನಿಟಿ ಮಾಲ್ ಸಮೀಪದ ಗಲಿ ನಂಬರ್ 11ರಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕಟ್ಟಡದ ಮೆಜ್ಜನೈನ್ ಮಹಡಿಯಲ್ಲಿ ಸಿಲುಕಿದ್ದ ಆರು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ, ಆಂಬುಲೆನ್್ಸ ಹಾಗೂ ಪೊಲೀಸ್ ವಾಹನಗಳ ಮೂಲಕ ಹೆಡ್ಗೇವಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ನಾಲ್ವರು ಮೃತಪಟ್ಟಿರುವುದಾಗಿ ಘೋಷಿಸಿದ್ದು, ಉಳಿದ ಇಬ್ಬರಿಗೆ ಸುಮಾರು ಶೇ.10ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಟ್ಟಡವು ನೆಲಮಹಡಿ, ಮೆಜ್ಜನೈನ್ ಮಹಡಿ ಹಾಗೂ ಹೆಚ್ಚುವರಿಯಾಗಿ ಮೂರು ಮಹಡಿಗಳನ್ನು ಹೊಂದಿತ್ತು. ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಹಾಗೂ ಇತರ ತುರ್ತು ರಕ್ಷಣಾ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
Delhi House Fire E-Rickshaw Charging Point
