Homeಅಂತಾರಾಷ್ಟ್ರೀಯಅಫ್ಘಾನಿಸ್ತಾನದ ಶಾಲೆಯಲ್ಲಿ ಸ್ಫೋಟ: 10 ಮಂದಿ ಸಾವು, 110 ಜನರಿಗೆ ಗಾಯ

ಅಫ್ಘಾನಿಸ್ತಾನದ ಶಾಲೆಯಲ್ಲಿ ಸ್ಫೋಟ: 10 ಮಂದಿ ಸಾವು, 110 ಜನರಿಗೆ ಗಾಯ

ಕಾಬೂಲ್‌‍, ನ. 28-ಪೂರ್ವ ಅಫ್ಘಾನಿಸ್ತಾನದ ಕುನಾರ್‌ ಪ್ರಾಂತ್ಯದಲ್ಲಿರುವ ಪ್ರಾಥಮಿಕ ಹಾಗೂ ಮಧ್ಯಮ ಶಾಲೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದು, 110 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಬಹುತೇಕ ಮಕ್ಕಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟವು ಶಾಲೆಯ ಪಕ್ಕದಲ್ಲಿದ್ದ ಸ್ಫೋಟಕ ಸಂಗ್ರಹಣಾ ಘಟಕದಿಂದ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಕುನಾರ್‌ ಪ್ರಾಂತ್ಯದ ಸಂಸ್ಕೃತಿ ಮತ್ತು ಮಾಹಿತಿ ನಿರ್ದೇಶಕ ಸಾಮಿ ಉಲ್‌ ಹಕ್‌ ಬಯಾನ್‌ ಅವರ ಪ್ರಕಾರ, ಪ್ರಾಂತೀಯ ರಾಜಧಾನಿ ಅಸಾದಾಬಾದ್‌ನ ಹೊರವಲಯದಲ್ಲಿರುವ ಶಾಲೆಯಲ್ಲಿ ಸ್ಫೋಟ ಸಂಭವಿಸಿದ್ದು, ಗಣಿಗಾರಿಕೆ ಕಂಪನಿಗಳಿಗೆ ಸೇರಿದ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಘಟಕದಲ್ಲಿನ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
ಅಫ್ಘಾನಿಸ್ತಾನದ ಗೃಹ ಸಚಿವಾಲಯದ ವಕ್ತಾರ ಅಬ್ದುಲ್‌ ಮತೀನ್‌ ಖಾನಿ, ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದು, 110 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ವಾರ್ಡ್‌ನಿಂದ ದೊರೆತ ದೃಶ್ಯಗಳಲ್ಲಿ ಗಾಯಗೊಂಡ ಪುಟ್ಟ ಮಕ್ಕಳು ಕಾಣಿಸಿದ್ದು, ಹಲವರ ತಲೆಗೆ ಬ್ಯಾಂಡೇಜ್‌ ಹಾಕಲಾಗಿತ್ತು. ಕೆಲ ಮಕ್ಕಳು ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿರುವ ದೃಶ್ಯಗಳೂ ಕಂಡುಬಂದಿವೆ. ಶಾಲೆಯ ಪಕ್ಕದಲ್ಲೇ ವಾಸವಿರುವ ನೂರ್‌ ರೆಹಮಾನ್‌ ಅವರು ಸ್ಫೋಟದ ಸದ್ದು ಕೇಳಿ ಧೂಳು ಮೇಲಕ್ಕೆ ಏರುತ್ತಿರುವುದನ್ನು ಕಂಡಿದ್ದಾರೆ.

ಸ್ಫೋಟದ ಬಳಿಕ ಧೂಳಿನ ನಡುವೆಯೇ ಓಡಿಹೋದೆ. ನಮ್ಮ ಮನೆಯ ಮಕ್ಕಳೂ ಅಲ್ಲಿದ್ದರು. ಒಂದು ಕೊಠಡಿಯಲ್ಲಿ ಕಿರುಚಾಟ, ಆಕ್ರಂದನ ಕೇಳಿಸಿತು. ನನ್ನ ಸೊಸೆಯ ಕೈ ಕಾಣಿಸಿತು, ಅದು ಚಲಿಸುತ್ತಿತ್ತು. ತಕ್ಷಣ ಇಟ್ಟಿಗೆಗಳನ್ನು ತೆರವುಗೊಳಿಸಿ ಆಕೆಯನ್ನು ಹಾಗೂ ಇತರ ಗಾಯಾಳುಗಳನ್ನು ಹೊರಗೆಳೆದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News