ಲಾಸ್ ಏಂಜಲೀಸ್, ನ. 29-ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಬೆಳಗ್ಗೆ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಲಾಸ್ ಏಂಜಲೀಸ್ ನಗರದ ನೈಋತ್ಯ ಭಾಗದಲ್ಲಿರುವ ಪ್ರಸಿದ್ಧ ಕರಾವಳಿ ಪ್ರದೇಶ ಮ್ಯಾನ್ಹ್ಯಾಟನ್ ಬೀಚ್ನಿಂದ ಸುಮಾರು 5 ಕಿ.ಮೀ. ನೈಋತ್ಯದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ಭೂಕಂಪದ ಬಳಿಕ ಹತ್ತಾರು ಬಾರಿ ಭೂಮಿ ಕಂಪಿಸಿದ್ದು, ಪಸಾಡೆನಾದ ಐತಿಹಾಸಿಕ ರೋಸ್ ಬೌಲ್ ಕ್ರೀಡಾಂಗಣದಲ್ಲಿನ ಪತ್ರಕರ್ತರ ಗ್ಯಾಲರಿಯೂ ಕಂಪಿಸಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ ನಡುವಿನ ಫುಟ್ಬಾಲ್ ಪಂದ್ಯಕ್ಕೂ ಮುನ್ನ ಈ ಘಟನೆ ಸಂಭವಿಸಿದೆ.
ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ತಕ್ಷಣ ತುರ್ತು ಭೂಕಂಪ ಕಾರ್ಯಾಚರಣೆ ಆರಂಭಿಸಿ, ನಗರದ 106 ಠಾಣೆಗಳಿಂದ ಸಿಬ್ಬಂದಿಯನ್ನು ಮೂಲಸೌಕರ್ಯಗಳ ಪರಿಶೀಲನೆಗೆ ನಿಯೋಜಿಸಿತ್ತು. ಯಾವುದೇ ಹಾನಿ ಅಥವಾ ಗಾಯಗಳ ವರದಿ ಇಲ್ಲದಿರುವುದು ಖಚಿತವಾದ ಬಳಿಕ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ಮರಳಿಸಲಾಯಿತು.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ರಜಾ ವಾರಾಂತ್ಯದ ವೇಳೆ ಸಂಭವಿಸಿದ ಭೂಕಂಪ ಜನರಲ್ಲಿ ಆತಂಕ ಮೂಡಿಸಿದೆ. 2014ರ ಬಳಿಕ ಈ ಪ್ರದೇಶದಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪ ಇದಾಗಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಹಿರಿಯ ಭೂಕಂಪಶಾಸ್ತ್ರಜ್ಞೆ ಲೂಸಿ ಜೋನ್ಸ್, ಭೂಕಂಪದ ಬಳಿಕ ಸಂಭವಿಸಿದ ಕಂಪನಗಳ ಸರಣಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿದ್ದರೂ, ಸಹಜ ವ್ಯಾಪ್ತಿಯಲ್ಲೇ ಇವೆ ಎಂದು ಹೇಳಿದ್ದಾರೆ.
