ಬೆಂಗಳೂರು, ನ.29-ಯುವಜನತೆಯನ್ನು ಮಾದಕ ದ್ರವ್ಯಗಳ ವ್ಯಸನದಿಂದ ಮುಕ್ತಗೊಳಿಸಿ, ಆರೋಗ್ಯಕರ ಹಾಗೂ ಸಶಕ್ತ ಸಮಾಜ ನಿರ್ಮಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಹೇಳಿದರು. ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಅಹಿಂಸಾ ವಿಶ್ವ ಭಾರತಿ ಸಂಸ್ಥೆಯ 21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಶಾಂತಿ, ಸೌಹಾರ್ದತೆ, ಅಭಿವೃದ್ಧಿ ಮತ್ತು ಜಾಗತಿಕ ಶಾಂತಿ ವಿಷಯದ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪಂಜಾಬ್, ಹರಿಯಾಣ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಾದಕ ದ್ರವ್ಯಗಳ ವ್ಯಸನ ಗಂಭೀರ ಸಾಮಾಜಿಕ ಸವಾಲಾಗಿ ಪರಿಣಮಿಸುತ್ತಿದೆ. ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ನಶಾಮುಕ್ತ ಭಾರತ ನಿರ್ಮಾಣದ ರಾಷ್ಟ್ರೀಯ ಅಭಿಯಾನಕ್ಕೆ ತಮ್ಮ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಪ್ರಭಾವಶಾಲಿ ಸಂದೇಶದ ಮೂಲಕ ಕೈಜೋಡಿಸುವಂತೆ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಮನವಿ ಮಾಡಿದರು.
ಯುವಜನತೆಯನ್ನು ಮಾದಕ ವ್ಯಸನದಿಂದ ದೂರವಿಡುವುದು ಕೇವಲ ಕುಟುಂಬ ಅಥವಾ ಸರ್ಕಾರದ ಜವಾಬ್ದಾರಿಯಲ್ಲ, ಅದು ಇಡೀ ಸಮಾಜದ ಸಾಮೂಹಿಕ ಹೊಣೆಗಾರಿಕೆಯಾಗಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವಲ್ಲಿ ಯುವಜನತೆಯ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿ ದೇಶದ ಭವಿಷ್ಯವನ್ನು ಸುರಕ್ಷಿತವಾಗಿಡಲು ಯುವಜನತೆಯನ್ನು ವ್ಯಸನಮುಕ್ತರನ್ನಾಗಿ, ಆತ್ಮವಿಶ್ವಾಸವುಳ್ಳವರನ್ನಾಗಿ ಹಾಗೂ ಸಕಾರಾತ್ಮಕ ಚಿಂತನೆಯುಳ್ಳವರನ್ನಾಗಿ ರೂಪಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.
ಭಾರತವು ಋಷಿಮುನಿಗಳು ಹಾಗೂ ಮಹಾತ್ಮರ ಪವಿತ್ರ ಭೂಮಿಯಾಗಿದೆ. ಪ್ರೆತಿ, ಸೌಹಾರ್ದತೆ, ಪರಸ್ಪರ ವಿಶ್ವಾಸ, ಅಹಿಂಸೆ ಮತ್ತು ಶಾಂತಿಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸುವ ಅಗತ್ಯವಿದೆ. ಇಡೀ ವಿಶ್ವವೇ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ಜಲ ಸಂರಕ್ಷಣೆಯ ಕುರಿತು ಮಾತನಾಡಿದ ರಾಜ್ಯಪಾಲರು, ಮಹಾರಾಷ್ಟ್ರದಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಜಲ ಸಂರಕ್ಷಣಾ ಪ್ರಯತ್ನಗಳನ್ನು ಪ್ರಶಂಸೆ ವ್ಯಕ್ತಪಡಿಸಿ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಜಲಕ್ಷಾಮ ಗಂಭೀರ ಸವಾಲಾಗಿದೆ. ಜಲ ಸಂರಕ್ಷಣೆ ಕೇವಲ ಚರ್ಚೆಗೆ ಸೀಮಿತವಾಗದೆ, ಈ ನಿಟ್ಟಿನಲ್ಲಿ ಪರಿಣಾಮಕಾರಿ ಕಾರ್ಯಗಳು ಹಾಗೂ ಸಾಮೂಹಿಕ ಪ್ರಯತ್ನಗಳು ನಡೆಯಬೇಕು ಎಂದು ಅವರು ಹೇಳಿದರು. ಆಚಾರ್ಯ ಲೋಕೇಶ್ ಗುರೂಜಿ, ಶ್ರೀ ರವಿಶಂಕರ್ ಜೀ ಸೇರಿದಂತೆ ಹಲವು ಗಣ್ಯರು ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.
