ಚಿಕ್ಕಮಗಳೂರು,ನ.26- ಮಲೆನಾಡು ಭಾಗದಲ್ಲಿ ಅಂದರೆ ಕಾಡಾನೆಗಳು ಮತ್ತೊಂದೆಡೆ ಕಾಡುಕೋಣ ಹಾವಳಿಯಿಂದ ಜಿಲ್ಲೆಯ ರೈತರು ಹಾಗೂ ಕೂಲಿಕಾರ್ಮಿಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ ಮೂಡಿಗೆರೆ ಸುತ್ತಮುತ್ತ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕಳಸ, ಕೊಪ್ಪ, ಮೂಡಿಗೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಫಿ, ಟೀ ಹಾಗೂ ಕೃಷಿ ಜಮೀನುಗಳಲ್ಲಿ ಕಾಡುಕೋಣಗಳ ಸಂಚಾರ ಕಂಡುಬರುತ್ತಿದೆ.
ಕೆಲವು ಕಡೆ ಗುಂಪುಗುಂಪಾಗಿ ಕಾಡು ಪ್ರಾಣಿಗಳು ಕಾಣಿಸುತ್ತಿದ್ದು, ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಇದರಿಂದ ತೋಟಗಳಿಗೆ ಕೆಲಸಕ್ಕೆ ಹೋದ ಕಾರ್ಮಿಕರು, ಮಾಲೀಕರು ಸುರಕ್ಷಿತವಾಗಿ ವಾಪಸ್ ಮನೆಗೆ ಬರುತ್ತಾರೆಯೇ ಎಂಬ ಆತಂಕ ಕುಟುಂಬ ಸದಸ್ಯರಿಗೆ ಎದುರಾಗಿದೆ.
ಜಿಲ್ಲೆಯಲ್ಲಿ ಕೆಲವು ಕಾರ್ಮಿಕರು ಕಾಡುಕೋಣ ದಾಳಿಗೆ ಒಳಗಾಗಿದ್ದು, ಒಂದೆಡೆ ಕಾಡಾನೆ, ಮತ್ತೊಂದೆಡೆ ಕಾಡುಕೋಣ ಈ ಎರಡೂ ಪ್ರಾಣಿಗಳ ಹಾವಳಿ ನಡುವೆ ರೈತರು ಹಾಗೂ ಕೂಲಿಕಾರ್ಮಿಕರು ಹೈರಾಣರಾಗಿ ಹೋಗಿದ್ದಾರೆ. ಕಾಡುಪ್ರಾಣಿಗಳಿಂದ ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Chikkamagaluru farmers Anxiety Bison attack
