ಹೈದರಾಬಾದ್, ಅ. 17 (ಪಿಟಿಐ): ದೇಶವು ದಶಕಗಳಿಂದ ಎದುರಿಸುತ್ತಾ ಬಂದಿದ್ದ ಸಾಂಪ್ರದಾಯಿಕ ಆಂತರಿಕ ಭದ್ರತಾ ಪರಿಸ್ಥಿತಿಯು ಈಗ ಬದಲಾಯಿಸಲಾಗದ ರೀತಿಯಲ್ಲಿ ಮಾರ್ಪಟ್ಟಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಹೇಳಿದ್ದಾರೆ.
ಇಲ್ಲಿನ ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ನ 78ನೇ ನಿಯಮಿತ ನೇಮಕಾತಿ ಬ್ಯಾಚ್ನ ದೀಕ್ಷಾಂತ ಪರೇಡ್ (ತರಬೇತಿ ಮುಕ್ತಾಯ ಸಮಾರಂಭ) ಉದ್ದೇಶಿಸಿ ಮಾತನಾಡಿದ ಅವರು, ಆಂತರಿಕ ಭದ್ರತಾ ಸವಾಲುಗಳ ಪೈಕಿ ಉಗ್ರ ನಕ್ಸಲಿಸಂ ಸಂಪೂರ್ಣವಾಗಿ ಅಂತ್ಯಗೊಂಡಿದೆ ಮತ್ತು ಈಶಾನ್ಯ ಭಾರತದಲ್ಲಿನ ದಂಗೆಗಳು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿವೆ ಎಂದು ತಿಳಿಸಿದರು.
ದೇಶದ ಒಳಗೇ ಹುಟ್ಟಿಕೊಂಡ ಭಯೋತ್ಪಾದನೆ ಬಹುತೇಕ ಕೊನೆಗೊಂಡಿದೆ. ಹಾಗೆಯೇ, ವಿದೇಶಿ ಪ್ರೇರಿತ ಭಯೋತ್ಪಾದನೆಯೂ ದೇಶದ ಬೇರೆ ಯಾವುದೇ ಭಾಗದಲ್ಲಿ ಈಗ ಕಂಡುಬರುತ್ತಿಲ್ಲ ಎಂದು ಅವರು ಹೇಳಿದರು.
ಮಾದಕವಸ್ತುಗಳ ಕಳ್ಳಸಾಗಣೆ, ಸೈಬರ್ ಅಪರಾಧಗಳು ಮತ್ತು ಅಕ್ರಮ ವಲಸೆಯಂತಹ ಹೊಸ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸಲು ಸಿದ್ಧರಾಗುವಂತೆ ತರಬೇತಿ ಪೂರ್ಣಗೊಳಿಸಿದ ಐಪಿಎಸ್ ಅಧಿಕಾರಿಗಳಿಗೆ ಮೋಹನ್ ಕರೆ ನೀಡಿದರು.
