ಬೆಂಗಳೂರು,ಆ.17- ಸ್ಟಿಂಗ್ ಆಪರೇಷನ್ ಮಾಡಿದ ಆರೋಪಕ್ಕೆ ಒಳಗಾಗಿರುವ ವ್ಯಕ್ತಿಗೆ ಸರ್ಕಾರವೇ ಹೆದರುವ ಪರಿಸ್ಥಿತಿ ಉಂಟಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಲೋಕಭವನದಲ್ಲಿ ನೂತನ ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಗೃಹಸಚಿವರನ್ನು ಟ್ರ್ಯಾಪ್ ಮಾಡಿರಬಹುದು. ಪೊಲೀಸ್ ಅಧಿಕಾರಿಗಳ ಕಚೇರಿಯಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಕಾಲವೇ ಉತ್ತರ ಕೊಡುತ್ತದೆ ಎಂದು ಹೇಳಿದ್ದಾರೆ. ಯಾವ ಕಾಲದಲ್ಲಿ ಏನು ಉತ್ತರ ಬರುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ. ಸ್ಟಿಂಗ್ ಆಪರೇಷನ್ ಮಾಡಿದ ಆರೋಪಿತರನ್ನು ಬಂಧಿಸಲು ಸರ್ಕಾರಕ್ಕೆ ನೀಡಿದ ಎರಡು ದಿನಗಳ ಗಡುವು ಮುಗಿದಿದೆ. ಮುಂದೆ ಯಾವ ರೀತಿಯ ಹೋರಾಟ ಮಾಡಬೇಕು ಎಂಬ ಬಗ್ಗೆ ಪಕ್ಷದ ಕಚೇರಿಯಲ್ಲಿ ಶಾಸಕರು, ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಯಾರ ಮೇಲೂ ವೈಯಕ್ತಿಕವಾದ ದ್ವೇಷವಿಲ್ಲ. ಈ ದಿನದ ಪರಿಸ್ಥಿತಿಯಲ್ಲಿ ಸ್ಟಿಂಗ್ ಆಪರೇಷನ್ ಮೂಲಕ ಯಾರಿಗೂ ಗೌರವ ಬಾರದ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಸಂಪೂರ್ಣ ತೆರೆ ಎಳೆಯಬೇಕಿದೆ ಎಂದು ತಿಳಿಸಿದರು.
ಮಾಧ್ಯಮಕ್ಕೆ ಕಳಂಕ ಬರುವ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ವಾತಾವರಣ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಸರ್ಕಾರ ಹಲವು ರೀತಿ ಕಾನೂನು ಬಾಹಿರವಾಗಿ ದುಡ್ಡು ಹೊಡೆಯಲು ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಆಡಳಿತದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದ ರಾಜ್ಯ ನಮದು. ಮಾಧ್ಯಮದ ಆಶ್ರಯ ಪಡೆದು ಸ್ಟಿಂಗ್ ಆಪರೇಷನ್ ಮಾಡಿರುವ ಆರೋಪಕ್ಕೆ ಒಳಗಾಗಿದ್ದಾರೆ. ಆಡಳಿತ ನಡೆಸುತ್ತಿರುವವರಿಗೂ ಸ್ಟಿಂಗ್ ಆಪರೇಷನ್ ಆಗಿದ್ದರೆ ಆಶ್ಚರ್ಯ ಪಡುವಂತಿಲ್ಲ. ಹೀಗಾಗಿ ಅವರು ಕೈಗೊಂಬೆ ಮಾಡಿಕೊಂಡಿರಬಹುದು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿ ಹೆಸರು ಇಟ್ಟುಕೊಂಡು ಸ್ಟಿಂಗ್ ಆಪರೇಷನ್ ಮಾಡಲು ಹೊರಟಿದ್ದರು. ಮತ್ತೊಂದು ಸ್ಟಿಂಗ್ ಮೂಲಕ ತಡೆಯಲಾಯಿತು ಎಂದು ಹೇಳಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಸ್ಟಿಂಗ್ ಆಪರೇಷನ್ ಬಗ್ಗೆ ದೂರು ಕೊಟ್ಟಿದ್ದಾರೆ. 2011ರಲ್ಲಿ ಮಾಡಿರಬೇಕು ಅಂದುಕೊಂಡಿದ್ದೆ. ಆದರೆ 2023ರಲ್ಲಿ ಮಾಡಲಾಗಿದೆ ಎಂದು ಹೇಳಿರುವ ಮಾಹಿತಿ ಇದೆ ಎಂದರು.
ಗೃಹಸಚಿವರು ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಹೇಳಿದ್ದಾರೆ. ಸಿಜೆಪಿ ಪ್ರತಿಭಟನೆಗೆ ಎಷ್ಟು ಫಂಡ್ ಕೊಡುತ್ತಿದ್ದಾರೆ ಎಂದು ಅವರೇ ಹೇಳಬೇಕು. ನಾನು ಯಾವ ಹುದ್ದೆಯ ಮೇಲೂ ಕಣ್ಣು ಹಾಕಿಲ್ಲ. ನ್ಯಾಯಯುತವಾಗಿ ಕೆಲಸ ಮಾಡಿ ಎಂದಷ್ಟೇ ಹೇಳುತ್ತಿದ್ದೇನೆ. ಅಕ್ರಮ ವ್ಯವಹಾರಗಳಿಗೆ ಅವಕಾಶ ಮಾಡಿಕೊಡಬೇಡಿ. ಗೃಹಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ ಸಿಬ್ಬಂದಿಗಳ ನಕಲಿ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಆಗಿರುವ ಮಾಹಿತಿ ಇದೆ. ಈ ರೀತಿ ಕಾನೂನು ಬಾಹಿರ ವ್ಯವಹಾರ ನಡೆಸುವ ಮೂಲಕ ಅವರು ಪ್ರಮಾಣಪತ್ರ ಪಡೆಯಬಹುದು ಎಂದು ವ್ಯಂಗ್ಯವಾಡಿದರು.
ಹಿರಿಯ ಪೊಲೀಸ್ ಅಧಿಕಾರಿ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪವಿದ್ದು, ಈ ಬಗ್ಗೆ ಆ ಅಧಿಕಾರಿ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಪ್ರಾಮಾಣಿಕವಾಗಿದ್ದರೆ ತನಿಖೆಗೆ ಆ ಅಧಿಕಾರಿ ಬೇಡ ಎಂದು ಹೇಳುವುದು ಏಕೆ? ರಾಜ್ಯ ಸರ್ಕಾರದ ಅಧಿಕಾರಿಯನ್ನೇ ಬೇಡ ಎನ್ನುತ್ತಿದ್ದಾರೆ. ಸುಳ್ಳು ಮಾಹಿತಿ ನೀಡುವುದು, ನಕಲಿ ದಾಖಲೆ ವಿಚಾರದಲ್ಲಿ ಪರಿಣಿತರಾಗಿದ್ದಾರೆ ಎಂದು ಟೀಕಿಸಿದರು.
