ಬೆಂಗಳೂರು,ಏ.4-ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದು, ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಳೇ ಮೈಸೂರು ಭಾಗದ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದು, ದೊಡ್ಡ ರಣತಂತ್ರ ಹೆಣೆದಿದ್ದಾರೆ.
ಹಳೇ ಮೈಸೂರು ಪ್ರಾಂತ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯ ಇರುವುದರಿಂದ ಇಲ್ಲಿ ಬಿಜೆಪಿಗೆ ಬಹಳಷ್ಟು ಸವಾಲುಗಳಿದ್ದು, ಈ ಭಾಗದಲ್ಲಿ ಕಾಂಗ್ರೆಸ್ ಪ್ರಭಾವವನ್ನು ತಗ್ಗಿಸಲು ಅಮಿತ್ ಶಾ ಅವರೇ ಮುತುವರ್ಜಿ ವಹಿಸಿ ಈ ಪ್ರಾಂತ್ಯದಲ್ಲಿನ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ.
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರನ್ನು ಕಣಕ್ಕಿಳಿಸಿರುವುದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್ ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದರ ಹಿಂದೆ ಅಮಿತ್ ಶಾ ಇದ್ದಾರೆ ಎನ್ನುವುದು ಬಿಜೆಪಿ ನಾಯಕರ ಅಭಿಪ್ರಾಯ.
ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಬಿಜೆಪಿ ಭಾರೀ ಪೈಪೋಟಿ ನೀಡುತ್ತಿರುವುದು ಕಮಲ ಪಡೆಗೆ ಲಾಭವಾಗುತ್ತಿದೆ. ಏಕೆಂದರೆ ಕಾಂಗ್ರೆಸ್ ಮಾಸ್ ಲೀಡರ್‍ಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರದಲ್ಲಿ ತೊಡಗಿರುವುದರಿಂದ ಇತರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಅವರಿಗೆ ಕಡಿಮೆ ಸಮಯ ಸಿಗಲಿದೆ. ಇದರಿಂದ ಬೇರೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.
ಇನ್ನು ಡಾ.ಸಿ.ಎನ್ ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುವ ಅಲೋಚನೆ ಅಮಿತ್ ಶಾ ಅವರದ್ದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಅದಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರ ಟಿಕೆಟ್ ಸಮಸ್ಯೆಯನ್ನು ಅಮಿತ್ ಶಾ ಬಗೆಹರಿಸಿದ ನಂತರವೇ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಸ್ರ್ಪಧಿಸಲು ನಿರ್ಧರಿಸಿದ್ದರು.
ಇದರ ಬೆನ್ನಲ್ಲೇ ಸುಮಲತಾ ಅಂಬರೀಶ್ ಅವರು ನಾನು ಪಕ್ಷೇತರವಾಗಿ ಸ್ರ್ಪಧಿಸುವುದಿಲ್ಲ. ಬಿಜೆಪಿಗೆ ಸೇರುತ್ತೇನೆ ಎನ್ನುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇದು ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ಬಿಜೆಪಿ ರೂಪಿಸಿರುವ ದೊಡ್ಡ ಯೋಜನೆಯನ್ನು ಬಹಿರಂಪಡಿಸಿದೆ.
ಅಮಿತ್ ಶಾ ಅವರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಇದೆ ಎನ್ನಲಾದ ಶೀತಲ ಸಮರವನ್ನು ಕೂಡ ಪ್ರಸ್ತಾಪಿಸಿದ್ದು, ಸಿದ್ದರಾಮಯ್ಯ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಡಿ.ಕೆ.ಶಿವಕುಮಾರ್ ಅದನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದರು. ಈಗ ಅದರ ಲಾಭವನ್ನು ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.
ಕೇವಲ ಮೈಸೂರು – ಕೊಡಗು, ಬೆಂಗಳೂರು ಗ್ರಾಮಾಂತರ, ಮಂಡ್ಯ ಮೂರು ಪ್ರಮುಖ ಕ್ಷೇತ್ರಗಳಲ್ಲದೇ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ದಾವಣಗೆರೆ ಸ್ಥಾನಗಳನ್ನೂ ಅಮಿತ್ ಶಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇಲ್ಲಿ ಹಾಲಿ ಸಂಸದರ ಬದಲಿಗೆ ವಿ ಸೋಮಣ್ಣ, ಡಾ ಕೆ ಸುಧಾಕರ್, ಗೋವಿಂದ್ ಕಾರಜೋಳ ಮತ್ತು ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಕ್ಷೇತ್ರಗಳ ಕೋರ್ ಕಮಿಟಿ ಸಭೆ ನಡೆಸಿ ಗೆಲುವಿನ ಟಾರ್ಗೆಟ್ ಅನ್ನು ಅಮಿತ್ ಶಾ ನೀಡಿದ್ದಾರೆ.