Friday, May 3, 2024
Homeರಾಜ್ಯಮೈತ್ರಿ ಅಭ್ಯರ್ಥಿಗಳಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ : ಬಿ.ವೈ.ವಿಜಯೇಂದ್ರ

ಮೈತ್ರಿ ಅಭ್ಯರ್ಥಿಗಳಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ : ಬಿ.ವೈ.ವಿಜಯೇಂದ್ರ

ಹಾಸನ,ಏ.4- ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಅಭೂತಪೂರ್ವವಾದಂತಹ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು.

ಪ್ರಧಾನಿ ನರೇಂದ್ರಮೋದಿ ಅವರ ಕನಸಿನಂತೆ 2047ರ ವೇಳೆಗೆ ವಿಕಸಿತ ಭಾರತ ಆಗಿ ಪರಿವರ್ತನೆ ಆಗಬೇಕು. ಅದಕ್ಕಾಗಿ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಮಂತ್ರಿ ಆಗಬೇಕು, ಅದು ನನಸಾಗುವ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ನರೇಂದ್ರಮೋದಿ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿರುವುದು ನಮಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ.
ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿಯುತ್ತೇವೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಶಾಸಕ ಪ್ರೀತಂಗೌಡ ಗೈರು ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ನಾಯಕರು ಕುಳಿತು ಪದಾಧಿಕಾರಿಗಳ ಸಭೆ ಮಾಡಿದ್ದಾರೆ. ಒಂದೆರಡು ದಿನದಲ್ಲಿ ವಾತಾವರಣ ತಿಳಿಯಾಗಲಿದೆ. ನಮ್ಮ ಕರ್ತವ್ಯ ಕೂಡ ಇರುತ್ತದೆ.

ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇ ಗೌಡರು ಕೂಡ ಆಶೀರ್ವಾದ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿಯವರ ಬಗ್ಗೆ ಗೌಡರು ಅಚಲ ವಿಶ್ವಾಸವನ್ನು ಹೊಂದಿದ್ದಾರೆ ಎಂದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ದೆಹಲಿ ವರಿಷ್ಠರು ಸಮಾಧಾನ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ವಿಚಾರದ ವಿಚಾರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದ ಮೇಲೆ ಹೇಳುತ್ತೇನೆ ಎಂದು ಹೇಳಿದರು.

ಪ್ರಜ್ವಲ್ ನಾಮಪತ್ರ ಸಲ್ಲಿಕೆ :
ಹಾಸನ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರುಗಳಾದ ಸಿಮೆಂಟ್ ಮಂಜು, ಎಚ್.ಕೆ.ಸುರೇಶ್, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಉಪಾಸಭಾಪತಿ ಪ್ರಾಣೇಶ್, ಎಚ್.ಕೆ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮ ಅವರಿಗೆ ಪ್ರಜ್ವಲ್ ನಾಮಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸೂಚಕರಾಗಿ ಪ್ರಜ್ವಲ್ರವರ ನಾಮಪತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹಿ ಹಾಕಿ ತೆರಳಿದರು. ಹಾಸನದಲ್ಲಿ ನಡೆದ ರೋಡ್ ಶೋನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಎಂಎಲ್ಸಿ ಸೂರಜ್ ರೇವಣ್ಣ, ಭವಾನಿ ರೇವಣ್ಣ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರು ಉಪಸ್ಥಿತರಿದ್ದರು.

RELATED ARTICLES

Latest News