ಬೆಂಗಳೂರು,ಏ.4- ಕರ್ನಾಟಕ ಸರಕಾರವು ಐಟಿ ಕ್ಷೇತ್ರಕ್ಕೆ ವಿರುದ್ಧವಾದ ನೀತಿ ಅನುಸರಿಸುತ್ತಿದೆ. ಇವತ್ತು ಎಲ್ಲ ಐಟಿ ಬಾಂಧವರ ಸ್ಥಿತಿ ಚಿಂತಾಜನಕವಾಗಿದೆ. ಇದು ಅತ್ಯಂತ ಖೇದಕರ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ಟೀಕಿಸಿದರು.
ಸುದ್ದಿಗೋಷ್ಠಿ ಮಾತನಾಡಿದ ಅವರು, ಬೆಂಗಳೂರಿಗೆ ಭಯೋತ್ಪಾದಕರು ಅತಿ ಸುಲಭವಾಗಿ ಬರುತ್ತಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸೋಟದಿಂದ ಆತಂಕ ಹೆಚ್ಚಿದೆ. ಬೆಂಗಳೂರು ಭಯೋತ್ಪಾದಕರ ಸ್ಥಳವಾಗುತ್ತಿದೆ ಜೊತೆಗೆ ಕಳೆದ 6 ತಿಂಗಳಿಂದ ನಗರದಲ್ಲಿ ನೀರಿನ ಬರ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ನೀರಿನ ಟ್ಯಾಂಕರ್ಗಳಿಗೂ ಸರಿಯಾದ ನೀತಿ ರೂಪಿಸಿಲ್ಲ; ಐಟಿ ಉದ್ಯೋಗಿಗಳಿರುವ ಫ್ಲ್ಯಾಟ್ಗಳಲ್ಲಿ ಇವತ್ತು ನೀರು ಸಿಗುತ್ತಿಲ್ಲ. ಕೊಳವೆಬಾವಿ ಕೊರೆಸುವ ದರವೂ ಬಹುತೇಕ ದುಪ್ಪಟ್ಟಾಗಿದೆ. ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದೆ, ಐಟಿ ಉದ್ಯೋಗಿಗಳು ರಸ್ತೆಯಲ್ಲಿ ಕಾಯುವ ದುಃಸ್ಥಿತಿ ಬಂದಿದೆ ಎಂದು ದೂರಿದರು.
ಬೆಂಗಳೂರು ಅಭಿವೃದ್ಧಿ ಸಚಿವರು ಎಂದು ಡಿ.ಕೆಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರು ಗುತ್ತಿಗೆ ನೀಡಿದ್ದಾರೆ. ಆದರೆ ಅವರು ಒಂದು ದಿನವೂ ರಸ್ತೆಗಿಳಿದಿಲ್ಲ. ಇದರಿಂದ ಸಾಫ್ಟ್ವೇರ್ ಉದ್ಯಮಗಳು ಬೇರೆಡೆಗೆ ತೆರಳುವ ಸಾಧ್ಯತೆ ಇದೆಯೇ ಎಂಬ ಯೋಚನೆ ಕಾಡುತ್ತಿದೆ ಎಂದರು.
ಗರಿಷ್ಠ ಆದಾಯ ನೀಡುವ ಸಾಫ್ಟ್ವೇರ್ ರಂಗದ ಕುರಿತು ರಾಜ್ಯ ಸರಕಾರ ಅತ್ಯಂತ ನಿರ್ಲಕ್ಷ್ಯ ವಹಿಸಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಸಾಫ್ಟ್ವೇರ್ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ಈ ಕ್ಷೇತ್ರದ ಕುರಿತು ಸಚಿವರು ಒಂದು ಪೈಸೆಯಷ್ಟೂ ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.
ಬೆಂಗಳೂರು ಇಡೀ ವಿಶ್ವದ ಅತಿ ದೊಡ್ಡ ಐ.ಟಿ. ಹಬ್ ಎಂದು ಗುರುತಿಸಿಕೊಂಡಿದೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ 54 ಲಕ್ಷ ಉದ್ಯೋಗಿಗಳಿದ್ದಾರೆ. ಆ ಪೈಕಿ 18 ಲಕ್ಷ ಜನ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ.
ಒಟ್ಟು ಭಾರತದ ರಫ್ತಿನಲ್ಲಿ ಶೇ.12ರಷ್ಟು ಪಾಲು ಕರ್ನಾಟಕದ ಐಟಿ ಹಬ್ನದು. ವಿಶ್ವಾದ್ಯಂತ ಪ್ರಸಿದ್ಧಿ ಪಡೆದ ಟಿಸಿಎಸ್, ವಿಪೊ್ರೀ, ಇನ್ಫೋಸಿಸ್ , ಮೈಂಡ್ಟ್ರೀ ಮತ್ತಿತರ 10-12 ಕಂಪೆನಿಗಳು ಸೇರಿ 67 ಸಾವಿರ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಸಿವೆ. ಇವು 18 ಲಕ್ಷ ಉದ್ಯೋಗಿಗಳಿಗೆ ಉದ್ಯೋಗ ಕೊಟ್ಟಿವೆ. ಇದು ಹೆಮ್ಮೆಯ ವಿಚಾರ ಎಂದು ಹೇಳಿದರು.
ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ್ ಕುಮಾರ್, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್.ಜಿ.ಎಸ್ ಹಾಜರಿದ್ದರು.