ಬೆಂಗಳೂರು, ಅ. 22- ರೀಲ್ಸ್ ಹುಚ್ಚಾಟಕ್ಕೆ ವಿಧಾನಸೌಧವನ್ನು ಬಾಂಬ್ ಇಟ್ಟು ಸ್ಫೋಟಿಸಿದಂತೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಹಜರತ್ ಅಲಿ (25) ಬಂಧಿತ ಆರೋಪಿ.
ಜೆ.ಸಿ. ರಸ್ತೆಯ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಎಸ್.ಪಿ. ರಸ್ತೆಯಲ್ಲಿ ವಾಸವಾಗಿದ್ದನು. ನಗರದ ಕೆಲವು ಪ್ರಮುಖ ಕಟ್ಟಡಗಳು ಹಾಗೂ ರಸ್ತೆಗಳ ವಿಡಿಯೋಗಳನ್ನು ಈತ ಚಿತ್ರೀಕರಿಸಿಕೊಂಡಿದ್ದ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ.
ಈ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಈತ ಬೇರೆ ಯಾವುದಾದರೂ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದನೇ ಅಥವಾ ಇದರ ಗಂಭೀರತೆಯನ್ನು ಅರಿಯದೆ ಹುಚ್ಚಾಟ ಮೆರೆದಿದ್ದನೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶಕ್ತಿಕೇಂದ್ರವಾಗಿರುವ ವಿಧಾನಸೌಧದ ಬಗ್ಗೆ ಇಂತಹ ಗಂಭೀರ ಸ್ವರೂಪದ ವಿಡಿಯೋ ಸೃಷ್ಟಿಸಿರುವುದು ಭದ್ರತಾ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ.
ಆರೋಪಿ ಹಜರತ್ ಅಲಿ ವಿಧಾನಸೌಧದ ಮುಂದೆ ತೆಗೆಸಿಕೊಂಡಿದ್ದ ತನ್ನ ಫೋಟೊಗಳನ್ನು ದುರುಪಯೋಗಪಡಿಸಿಕೊಂಡು, ಸ್ಫೋಟದ ದೃಶ್ಯಗಳನ್ನು ಸೃಷ್ಟಿಸಿ ನಕಲಿ ರೀಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆತ ಹಂಚಿಕೊಂಡಿದ್ದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
