Friday, November 22, 2024
Homeರಾಜ್ಯಲೋಕಕಣದಲ್ಲಿ ಮೂವರು ಹಾಲಿ ಶಾಸಕರು, ಓರ್ವ ಪರಿಷತ್ ಸದಸ್ಯ : ರಾಜ್ಯದಲ್ಲಿ ಉಪಚುನಾವಣೆ ಅನಿವಾರ್ಯ..?

ಲೋಕಕಣದಲ್ಲಿ ಮೂವರು ಹಾಲಿ ಶಾಸಕರು, ಓರ್ವ ಪರಿಷತ್ ಸದಸ್ಯ : ರಾಜ್ಯದಲ್ಲಿ ಉಪಚುನಾವಣೆ ಅನಿವಾರ್ಯ..?

ಬೆಂಗಳೂರು,ಏ.6- 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮೂವರು ಹಾಲಿ ಶಾಸಕರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯ ಕಣಕ್ಕಿಳಿದಿದ್ದಾರೆ. ಇವರು ಗೆಲುವು ಸಾಧಿಸಿದರೆ ಈ ಕ್ಷೇತ್ರಗಳಿಗೆ ಮತ್ತೊಮ್ಮೆ ಉಪಚುನಾವಣೆ ನಡೆಯುವ ಅನಿವಾರ್ಯತೆ ಎದುರಾಗಲಿದೆ. ಈ ಹಿಂದೆಯೂ ಸಹ ವಿಧಾನಸಭೆ ಸದಸ್ಯರು ಲೋಕಸಭೆಗೆ ಸ್ರ್ಪಧಿಸಿರುವ ಉದಾಹರಣೆಗಳಿವೆ. ಅದೇ ರೀತಿ ವಿಧಾನಸಭೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದು, ಒಂದು ಕ್ಷೇತ್ರಕ್ಕೆ ಮತ್ತೆ ಉಪ ಚುನಾವಣೆ ನಡೆಸಿರುವ ನಿದರ್ಶನಗಳಿವೆ.

ಚನ್ನಪಟ್ಟಣ ಕ್ಷೇತ್ರದ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರೆ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಕಣದಲ್ಲಿದ್ದಾರೆ. ಇನ್ನು ಸಂಡೂರು ಕ್ಷೇತ್ರದ ಶಾಸಕ ಈ.ತುಕರಾಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಹಾಗೂ ಪರಿಷತ್‍ನ ಪ್ರತಿಪಕ್ಷದ ನಾಯಕರೂ ಆಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಕಣದಲ್ಲಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಒಬ್ಬರು ಸಚಿವರಾಗಿದ್ದವರು, ಮತ್ತೊಬ್ಬರು ಶಾಸಕರು. ಪ್ರಬಲ ಅಭ್ಯರ್ಥಿಗಳಾಗಿರುವ ಈ ನಾಲ್ವರು ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಕ್ರಾಂಗೆಸ್‍ನಿಂದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪ್ರತಿಸ್ರ್ಪಧಿಯಾಗಿದ್ದರೆ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‍ನ ಕಾರ್ಯಕರ್ತ ಆನಂದಸ್ವಾಮಿ ಗಡ್ಡದೇವರ ಮಠ ಪೈಪೋಟಿ ನೀಡುತ್ತಿದ್ದಾರೆ.

ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಇವರಿಗೆ ಶಾಸಕ ತುಕರಾಂ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಮಾಜಿ ಸಂಸದ ಹಾಗೂ ಇತ್ತೀಚೆಗಷ್ಟೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಕಣದಲ್ಲಿದ್ದು, ಇಲ್ಲಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಎದುರಾಳಿಯಾಗಿದ್ದಾರೆ. ಇಬ್ಬರಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಲಿ ಶಾಸಕರು ಗೆಲುವು ಕಂಡರೆ ವಿಧಾನಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾಗುತ್ತದೆ. ನಂತರ ಉಪಚುನಾವಣೆ ಅನಿವಾರ್ಯವಾಗಲಿದೆ.

ಹಾಲಿ ಸಂಸದರ ಅಗ್ನಿಪರೀಕ್ಷೆ:
ಹಾಲಿ ಸಂಸದರಾಗಿರುವವರ ಪೈಕಿ ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ, ಬಾಗಲಕೋಟೆಯಿಂದ ಪಿ.ಸಿ. ಗದ್ದಿಗೌಡರ್, ವಿಜಾಪುರದಿಂದ ರಮೇಶ್ ಜಿಗಜಿಣಗಿ, ಕಲಬುರಗಿಯಿಂದ ಉಮೇಶ್ ಜಾಧವ್, ರಾಯಚೂರಿನಿಂದ ರಾಜಾ ಅಮರೇಶ್ವರ್ ನಾಯಕ್, ಬೀದರ್‍ನಿಂದ ಭಗವಂತ ಖೂಬಾ, ಧಾರವಾಡದಿಂದ ಪ್ರಹ್ಲಾದ್ ಜೋಷಿ, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಕಾಂಗ್ರೆಸ್‍ನಿಂದ, ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಹಾಸನದಿಂದ ಸಂಸತ್ ಮರುಪ್ರವೇಶಿಸುವ ವಿಶ್ವಾಸದಲ್ಲಿದ್ದಾರೆ.

ಹಾಲಿ ಸಂಸದರ ಪೈಕಿ ಬೆಳಗಾವಿಯಲ್ಲಿ ಮಂಗಳಾ ಅಂಗಡಿ, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ಬಳ್ಳಾರಿಯಲ್ಲಿ ವೈ.ದೇವೇಂದ್ರಪ್ಪ, ಹಾವೇರಿಯಲ್ಲಿ ಶಿವಕುಮಾರ್ ಉದಾಸಿ, ಉತ್ತರಕನ್ನಡದಲ್ಲಿ ಅನಂತ ಕುಮಾರ್ ಹೆಗಡೆ, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ್, ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್, ಚಿತ್ರದುರ್ಗದಲ್ಲಿ ಎ.ನಾರಾಯಣಸ್ವಾಮಿ, ತುಮಕೂರಿನಲ್ಲಿ ಜಿ.ಎಸ್.ಬಸವರಾಜ್, ಮೈಸೂರಿನಲ್ಲಿ ಪ್ರತಾಪ್ ಸಿಂಹ, ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್, ಬೆಂಗಳೂರು ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ, ಚಿಕ್ಕಬಳ್ಳಾಪುರದಲ್ಲಿ ಬಿ.ಎನ್.ಬಚ್ಚೇಗೌಡ, ಕೋಲಾರದಲ್ಲಿ ಎಸ್.ಮುನಿಸ್ವಾಮಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಇದರಲ್ಲಿ ಕೆಲವು ಸಂಸದರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದರೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆಯಾಗಿದೆ. ಇನ್ನು ಕಾಂಗ್ರೆಸ್‍ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಮರು ಸ್ರ್ಪಸಿದ್ದರೆ, ಚಿಕ್ಕೋಡಿಯಲ್ಲಿ ಪ್ರಿಯಾಂಕ ಜಾರಕಿಹೊಳಿ, ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಬಾಗಲಕೋಟೆಯಲ್ಲಿ ಸಂಯುಕ್ತ ಎಸ್.ಪಾಟೀಲ್, ಬೀದರ್‍ನಲ್ಲಿ ಸಾಗರ್ ಖಂಡ್ರೆ, ಚಾಮರಾಜನಗರದಲ್ಲಿ ಸುನೀಲ್ ಬೋಸ್, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯಾ ರೆಡ್ಡಿ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್, ಶಿವಮೊಗ್ಗದಿಂದ ಗೀತಾ ಶಿವರಾಜ್‍ಕುಮಾರ್ ಸ್ರ್ಪಸುತ್ತಿದ್ದಾರೆ. ಅದರಲ್ಲೂ ಸಚಿವರ ಕುಟುಂಬದ ಸದಸ್ಯರು ಕಣದಲ್ಲಿರುವುದು ಮತ್ತೊಂದು ವಿಶೇಷ.

RELATED ARTICLES

Latest News