Thursday, May 2, 2024
Homeಅಂತಾರಾಷ್ಟ್ರೀಯAI ಮೂಲಕ ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಚೀನಾ ಯತ್ನ, ಮೈಕ್ರೋಸಾಫ್ಟ್ ಎಚ್ಚರಿಕೆ

AI ಮೂಲಕ ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಚೀನಾ ಯತ್ನ, ಮೈಕ್ರೋಸಾಫ್ಟ್ ಎಚ್ಚರಿಕೆ

ನವದೆಹಲಿ, ಏ.6- ಲೋಕಸಭೆ ಚುನಾವಣೆ ಮೇಲೆ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದುರ್ಬಳಕೆ ಮಾಡಿಕೊಂಡು ಚೀನಾಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಭಾರತಕ್ಕೆ ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದುರುಪಯೋಗದ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಈ ಎಚ್ಚರಿಕೆ ಬಂದಿರುವುದು ಗಮನಾರ್ಹ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚೀನಾ ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಚುನಾವಣೆಗಳ ಮೇಲೆ ಪ್ರಭಾವ ಬೀರಬಹುದು ಎಂದು ಮೈಕ್ರೋಸಾಫ್ಟ್ ಹೇಳಿದೆ. ಈ ಅವಧಿಯಲ್ಲಿ ಹ್ಯಾಕಿಂಗ್ ಪ್ರಯತ್ನಗಳ ಬಗ್ಗೆಯೂ ಕಂಪನಿ ಎಚ್ಚರಿಕೆ ನೀಡಿದೆ.

ಮೈಕ್ರೋಸಾಫ್ಟ್ ಪ್ರಕಾರ, ಚೀನಾ ಸರ್ಕಾರದ ಸೈಬರ್ ಗುಂಪುಗಳು ಈ ವರ್ಷ ನಡೆಯಲಿರುವ ಪ್ರಮುಖ ಚುನಾವಣೆಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ ಮತ್ತು ಉತ್ತರ ಕೊರಿಯಾ ಕೂಡ ಇದರಲ್ಲಿ ಪಾತ್ರ ವಹಿಸಬಹುದು. ಈ ವರ್ಷ ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ವಿಶೇಷವಾಗಿ ಭಾರತ, ದಕ್ಷಿಣ ಕೊರಿಯಾ ಮತ್ತು ಅಮೆರಿಕದಲ್ಲಿ ಚುನಾವಣೆಗಳು ನಡೆಯಲಿವೆ.

ಹ್ಯಾಕರ್‍ಗಳಿಗೆ ಎಐ ಪ್ರಮುಖ ಅಸ್ತ್ರವಾಗಿದೆ ಎಂದು ಕಂಪನಿ ಹೇಳಿದೆ. ಹ್ಯಾಕರ್‍ಗಳು ವೀಡಿಯೊಗಳನ್ನು ಸುಲಭವಾಗಿ ಮಾರ್ಫ್ ಮಾಡಬಹುದು (ವೀಡಿಯೊಗಳನ್ನು ಟ್ಯಾಂಪರಿಂಗ್ ಮಾಡುವುದು). ಎಐ ಸಹಾಯದಿಂದ ಪ್ರಸಿದ್ಧ ವ್ಯಕ್ತಿಗಳ ಧ್ವನಿಗಳನ್ನು ಬದಲಾಯಿಸಬಹುದು ಮತ್ತು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಇದು ವೈರಲ್ ಆಗಲು ಮತ್ತು ಲಕ್ಷಾಂತರ ಜನರನ್ನು ತಲುಪುವುದರಿಂದ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ.

ತೈವಾನ್ ಚುನಾವಣೆಯಲ್ಲಿ ಎಐ ಬಳಕೆ:
2024ರ ಜನವರಿಯಲ್ಲಿ ತೈವಾನ್‍ನ ಅಧ್ಯಕ್ಷೀಯ ಚುನಾವಣೆಗಳನ್ನು ಅಸ್ಥಿರಗೊಳಿಸಲು ಎಐ ಬಳಸಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಇದು ಎಐ ಮೂಲಕ ವಿದೇಶಿ ಚುನಾವಣೆಯ ಮೇಲೆ ಪ್ರಭಾವ ಬೀರುವ ಮೊದಲ ಪ್ರಯತ್ನವಾಗಿದೆ. ಮೀಮ್‍ಗಳು, ವೀಡಿಯೊಗಳು ಮತ್ತು ಆಡಿಯೊಗಳನ್ನು ಪ್ರಚಾರ ಮಾಡಲು ಚೀನಾ ನಿರಂತರವಾಗಿ ಈ ವಿಧಾನವನ್ನು ಬಳಸುತ್ತಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

ಭಾರತದಲ್ಲಿ ಏಪ್ರಿಲ್ 19ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಕೊನೆಯ ಹಂತದ ಮತದಾನವು 2024 ರ ಜೂನ್ 1ರಂದು ನಡೆಯಲಿದೆ ಮತ್ತು ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ವರದಿ ಬಿಡುಗಡೆ ಮಾಡಿದ್ದು, ಕಂಪನಿಯ ಥ್ರೆಟ್ ಇಂಟೆಲಿಜೆನ್ಸ್ ತಂಡದ ವರದಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಚೀನೀ ಸೈಬರ್ ಗುಂಪುಗಳು 2024ರಲ್ಲಿ ವಿದೇಶಗಳ ಚುನಾವಣೆಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ ಎಂದು ಹೇಳಲಾಗಿದೆ.

RELATED ARTICLES

Latest News