Homeರಾಜ್ಯಜ್ವರ ಎಂದು ವಾಣಿ ವಿಲಾಸ ಆಸ್ಪತ್ರೆಗೆ ಬಂದ 57 ದಿನದ ಕಂದಮ್ಮನ ಕಾಲು ಬೆರಳುಗಳೇ ಕಟ್..!

ಜ್ವರ ಎಂದು ವಾಣಿ ವಿಲಾಸ ಆಸ್ಪತ್ರೆಗೆ ಬಂದ 57 ದಿನದ ಕಂದಮ್ಮನ ಕಾಲು ಬೆರಳುಗಳೇ ಕಟ್..!

ಬೆಂಗಳೂರು: ಅ,23: ಜ್ವರ ಬಂದಿದೆ ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪೋಷಕರಿಗೆ ವೈದ್ಯರ ನಿರ್ಲಕ್ಷ್ಯದ ಶಂಕೆ ದೊಡ್ಡ ಆಘಾತವನ್ನೇ ತಂದಿದೆ. ಕೇವಲ 57 ದಿನಗಳ ಹಸುಗೂಸಿನ ಕಾಲಿನ ಬೆರಳುಗಳನ್ನೇ ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ ತೆಗೆಯುವ ದುಸ್ಥಿತಿ ಎದುರಾಗಿದೆ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೈದ್ಯರ ವಿರುದ್ಧ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಜ್ವರಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದ ಪೋಷಕರು
ಅಕ್ಟೋಬರ್ 15ರಂದು ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ವಾಣಿ ವಿಲಾಸ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು ಜ್ವರಕ್ಕೆ ಔಷಧ ನೀಡಿದ್ದರು ಎನ್ನಲಾಗಿದೆ. ಬಳಿಕ ಮಗುವಿಗೆ ಐವಿ ಮೂಲಕ ಇಂಜೆಕ್ಷನ್ ನೀಡಲಾಗಿತ್ತು. ಆದರೆ, ಇಂಜೆಕ್ಷನ್ ನೀಡಿದ ನಂತರ ಮಗುವಿನ ಕಾಲಿನಲ್ಲಿ ಬದಲಾವಣೆ ಕಾಣಿಸಿಕೊಂಡಿದೆ ಎಂಬುದು ಪೋಷಕರ ಆರೋಪ.

ನೋಡನೋಡುತ್ತಿದ್ದಂತೆ ನೀಲಿಗಟ್ಟಿದ ಕಾಲು!:
ಇಂಜೆಕ್ಷನ್ ನೀಡಿದ ಬಳಿಕ ಮಗುವಿನ ಕಾಲು ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿತ್ತು. ನಂತರ ಕಾಲಿನ ಸ್ಥಿತಿ ಮತ್ತಷ್ಟು ಹದಗೆಟ್ಟು, ಅಂಗಾಂಶಗಳು ಕೊಳೆಯಲಾರಂಭಿಸಿದವು ಎಂದು ಹೇಳಲಾಗಿದೆ. ಕೇವಲ ಜ್ವರಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದ ತಮ್ಮ ಮಗುವಿಗೆ ಇಂತಹ ಸ್ಥಿತಿ ಎದುರಾಗಿರುವುದನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ.

ಶಸ್ತ್ರಚಿಕಿತ್ಸೆ ಮೂಲಕ ಕಾಲ್ಬೆರಳುಗಳ ತೆರವು
ಮಗುವಿನ ಕಾಲಿನ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕೊಳೆತಿದ್ದ ಕಾಲಿನ ಬೆರಳುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಕಂದಮ್ಮನಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂತಹ ದುಸ್ಥಿತಿ ಎದುರಾಗಿರುವುದು ಪೋಷಕರನ್ನು ತೀವ್ರ ಆತಂಕಕ್ಕೆ ದೂಡಿದೆ.

ವೈದ್ಯರ ನಿರ್ಲಕ್ಷ್ಯವೇ ಕಾರಣವೇ?:
ಐವಿ ಇಂಜೆಕ್ಷನ್ ನೀಡಿದ ಬಳಿಕವೇ ಮಗುವಿನ ಕಾಲಿನ ಸ್ಥಿತಿ ಹದಗೆಟ್ಟಿದೆ ಎಂಬ ಪೋಷಕರ ಆರೋಪ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂಜೆಕ್ಷನ್ ನೀಡುವಾಗ ಅಥವಾ ನಂತರ ಯಾವುದೇ ವೈದ್ಯಕೀಯ ಲೋಪವಾಗಿದೆಯೇ? ಮಗುವಿನ ಕಾಲಿಗೆ ರಕ್ತಪೂರೈಕೆಯಲ್ಲಿ ತೊಂದರೆ ಉಂಟಾಗಲು ಕಾರಣವೇನು? ಸಮಸ್ಯೆ ಕಾಣಿಸಿಕೊಂಡ ತಕ್ಷಣ ಸೂಕ್ತ ಚಿಕಿತ್ಸೆ ನೀಡಲಾಗಿತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಜ್ವರದಂತಹ ಸಾಮಾನ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದಿದ್ದ 57 ದಿನದ ಮಗುವಿನ ಕಾಲ್ಬೆರಳುಗಳನ್ನು ಕತ್ತರಿಸುವ ಪರಿಸ್ಥಿತಿ ಎದುರಾಗಿರುವ ಪ್ರಕರಣವು ಆಸ್ಪತ್ರೆಯ ಚಿಕಿತ್ಸಾ ಕ್ರಮಗಳ ಬಗ್ಗೆ ಗಂಭೀರ ಪರಿಶೀಲನೆ ನಡೆಸುವ ಅಗತ್ಯತೆ ಎದುರಾಗಿದೆ..

RELATED ARTICLES
spot_img

Latest News